ಬೆಂಗಳೂರು; ಫ್ಲ್ಯಾಟ್ ನಲ್ಲಿ ಆಕಸ್ಮಿಕ ಅಗ್ನಿ ಅನಾಹುತ ಸಂಭವಿಸಿದ ಪರಿಣಾಮ ಹೊಗೆಯಿಂದ ಉಸಿರು ಗಟ್ಟಿ ಮಂಗಳೂರು ಮೂಲದ ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಮ ಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್ ಮೆಂಟ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಮಂಗಳೂರಿನ ಕಾವೂರು ಮೂಲದ ಶರ್ಮಿಳಾ (34) ಮೃತರು. ಶರ್ಮಿಳಾ ಒಂದೂವರೆ ವರ್ಷದಿಂದ ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್ ಮೆಂಟ್‌ನಲ್ಲಿ ಸ್ನೇಹಿತೆ ಜತೆ ವಾಸವಾಗಿದ್ದರು. ತಮ್ಮ ಮನೆ ಸಮೀಪದ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಜೆ ಇದ್ದರಿಂದ ಈಕೆಯ ಸ್ನೇಹಿತೆ ಊರಿಗೆ ತೆರಳಿದ್ದರಿಂದ ಒಬ್ಬರೇ ಇದ್ದರು. ರಾತ್ರಿ 11 ಗಂಟೆ ಸುಮಾರಿಗೆ ಮನೆಯ ಕೋಣೆಯೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಆವರಿಸಿದೆ. ಆಗ ಪಕ್ಕದ ಕೋಣೆಯಲ್ಲಿದ್ದ ಶರ್ಮಿಳಾ ಕೂಡಲೇ ಆ ಕೋಣೆ ಕಡೆ ಬರಲು ಮುಂದಾಗಿದ್ದಾರೆ. ಇದೇ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಕತ್ತಲೆಯಲ್ಲಿ ಕಿಟಕಿ ಹಾಗೂ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಮನೆಯ ತುಂಬೆಲ್ಲ ದಟ್ಟವಾದ ಹೊಗೆ ಆವರಿಸಿದ್ದ ಪರಿಣಾಮ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಒಂದು ವರ್ಷದ ಹಿಂದೆ ಕೆಲಸ ಅರಸಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದರು.ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


