ಕಾರ್ಕಳ: ವಿಜಯನಗರ ಕಾಲಘಟ್ಟದಲ್ಲಿ ಸ್ಥಾಪನೆಗೊಂಡ ಐತಿಹಾಸಿಕ ಹಿನ್ನೆಲೆಯುಳ್ಳ ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ಕ್ಷೇತ್ರದ ಪುನರ್ ನಿರ್ಮಾಣದಿಂದ ವಿಜಯನಗರ ಸಾಮಾಜ್ರ್ಯದ ಗತವೈಭವವು ಮತ್ತೇ ಮೇಳೈಸಲಿದೆ ಎಂದು ರಾಜ್ಯ ಮುಜರಾಯಿ ಸಚಿವೆ ಶಶಿಕಾಲ ಜೊಲ್ಲೆ ಹೇಳಿದರು.
ಅವರು ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ನೂತನ ಶ್ರೀ ಕ್ಷೇತ್ರ ನಿರ್ಮಾಣ, ಅಷ್ಟಬಂಧ ಹಾಗೂ ಬ್ರಹಕಲಶೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಮುಷ್ಠಿ ಕಾಣಿಕೆ ಸಮರ್ಪಣಾ ಕಾರ್ಯಕ್ರಮದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ದೇವರ ಸಾನಿಧ್ಯದಲ್ಲಿ ಜಾತಿ, ಧರ್ಮ, ಪಂಥ, ಭೇಧ ಬಾವಗಳೆನ್ನದೇ ನಾವೆಲ್ಲರೂ ಒಂದೇ ತಾಯಿ ಮಕ್ಕಳೆಂಬ ಮನೋಭಾವನೆಯನ್ನು ಇಟ್ಟುಕೊಂಡು ಬಾಳಿ ಬದುಕಬೇಕಾಗಿದೆ. ಧಾರ್ಮಿಕತೆ, ಸಂಸ್ಕೃತಿ, ಕಲೆ, ಭಾಷೆಯ ಕೊಡುಗೆಯೂ ಮುಂದಿನ ಪೀಳಿಗೆಗೆ ದೊರೆಯುವಂತಾಗಲಿ ಎಂದರು. ಬದಲಾವಣೆ ಅನ್ನುವುದು ಜಗದ ನಿಯಮವಾಗಿದ್ದು, ಪ್ರಸ್ತುತ ಕಾಲಘಟ್ಟವೂ ಸ್ಪರ್ಧಾತ್ಮಕತೆಯಿಂದ ಕೂಡಿದೆ ಎಂದು ಅಭಿಪ್ರಾಯಿಸಿದರು.
ಕಾರ್ಕಳದ ಕೋಟೆ ಶ್ರೀ ಮಾರಿಯಮ್ಮ ನೂತನ ಕ್ಷೇತ್ರ ನಿರ್ಮಾಣಕ್ಕೆ ರಾಜ್ಯ ಸರಕಾರದಿಂದ ರೂ.1 ಕೋಟಿ ಮುಷ್ಠಿಕಾಣಿಕೆ ನೀಡಲಾಗುತ್ತಿದೆ. ಅದರಲ್ಲಿ ಮೊದಲ ಹಂತದಲ್ಲಿ ರೂ.25 ಲಕ್ಷ ಬಿಡುಗಡೆ ಮಾಡಿರುವುದಾಗಿ ಇದೇ ಸಂದರ್ಭದಲ್ಲಿ ರಾಜ್ಯ ಮುಜರಾಯಿ ಸಚಿವೆ ಶಶಿಕಾಲ ಜೊಲ್ಲೆ ಘೋಷಿಸಿದರು.


