ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆಯಲ್ಲಿ ಮದುವೆ ಹೊತ್ತಲ್ಲೇ ವರ ನಾಪತ್ತೆಯಾಗಿದ್ದು, ಅತಿಥಿಯಾಗಿ ಬಂದಿದ್ದ ವ್ಯಕ್ತಿ ವರನಾದ ಘಟನೆ ನಡೆದಿದೆ.
ತರೀಕೆರೆ ತಾಲ್ಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಸಹೋದರರಿಗೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಿಂದ ಹೆಣ್ಣು ತರಲಾಗಿತ್ತು. ಅಶೋಕ್ ಅವರ ವಿವಾಹ ಸುಗಮವಾಗಿ ನಡೆದಿದೆ. ಆದರೆ ಸಮಸ್ಯೆಯಾಗಿರುವುದು ಹೊಸದುರ್ಗ ತಾಲ್ಲೂಕಿನ ಯುವತಿ ಸಿಂಧುಳನ್ನು ವರಿಸಬೇಕಿದ್ದ ನವೀನ್ ನಲ್ಲಿ.

ಹೌದು, ನವೀನ್ ರಾತ್ರಿ ರಿಸೆಪ್ಷನ್ ನಲ್ಲಿ ಭಾಗಿಯಾಗಿದ್ದು ಬೆಳಿಗ್ಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಆತ ಪ್ರೀತಿಸಿದ ಹುಡುಗಿ ಮದುವೆಯಾಗಲು ಬಿಡುವುದಿಲ್ಲ. ಛತ್ರದಲ್ಲಿ ವಿಷ ಕುಡಿಯುವುದಾಗಿ ಬೆದರಿಸಿದ್ದರಿಂದ ನವೀನ್ ಮರ್ಯಾದೆಗೆ ಹೆದರಿ ಛತ್ರದಿಂದ ನಾಪತ್ತೆಯಾಗಿ ತುಮಕೂರಿಗೆ ತೆರಳಿದ್ದು, ತಾನು ಪ್ರೀತಿಸಿದ ಹುಡುಗಿಯೊಂದಿಗೆ ಹೋಗಿದ್ದರಿಂದ ನಡೆಯಬೇಕಿದ್ದ ಮದುವೆ ನಿಂತಿದೆ. ವಧು ಸಿಂಧು ಮತ್ತು ಆಕೆಯ ಕುಟುಂಬದವರ ಕಂಗಾಲಾಗಿ ಹೋಗಿದ್ದಾರೆ.
ಆಗ ಹೀರೋ ಆಗಿ ಬಂದವರೇ ದೋರನಾಳು ಗ್ರಾಮದ ಪಕ್ಕದ ನಂದಿ ಗ್ರಾಮದ ಯುವಕ, ಬೆಂಗಳೂರಿನ ಬಿಎಂಟಿಸಿ ಬಸ್‍ನಲ್ಲಿ ಕಂಡಕ್ಟರ್ ಚಂದ್ರು. ಸಿಂಧುವನ್ನು ತಾವು ಮದುವೆಯಾಗುವುದಾಗಿ ಹೇಳಿದ ಚಂದ್ರು, ಬಂಧು-ಬಾಂಧವರೊಂದಿಗೆ ಮಾತನಾಡಿ, ಹುಡುಗಿ ಒಪ್ಪಿದರೆ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಹಿರಿಯರ ಮಧ್ಯಸ್ಥಿಕೆಯಲ್ಲಿ ಕುಟುಂಬದವರ ಮನವೊಲಿಸಿ ಮದುವೆ ನೆರವೇರಿಸಲಾಗಿದೆ ಎಂದು ಹೇಳಲಾಗಿದೆ. ಅತ್ತ ನಾಪತ್ತೆಯಾಗಿರುವ ವರನಿಗಾಗಿ ಹುಡುಕಾಟ ನಡೆದಿದೆ.


