
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಪಂಪ್ವೆಲ್ ಸಮೀಪದ ಉಜ್ಜೋಡಿ ಗೋರಿಗುಡ್ಡ ಬಳಿ ಸಂಭವಿಸಿದ್ದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ ಜ್ಯೋತಿ (19) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಗರದ ಖಾಸಗಿ ಕಾಲೇಜೊಂದರಲ್ಲಿ ಜಿಎನ್ಎಂ (GNM) ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಅವರು, ಕುಟುಂಬಕ್ಕೆ ಆಧಾರವಾಗುವ ಕನಸು ನನಸಾಗುವ ಮೊದಲೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ನವೆಂಬರ್ 14ರಂದು ಬೆಳಿಗ್ಗೆ ಜ್ಯೋತಿ ಮತ್ತು ಅವರ ಸಂಬಂಧಿ ನಂದಿನಿ (19) ಉಜ್ಜೋಡಿ ಗೋರಿಗುಡ್ಡ ಬಳಿ ರಾಷ್ಟ್ರೀಯ ಹೆದ್ದಾರಿಯ ವಿಭಜಕ ದಾಟಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ತೊಕ್ಕೊಟ್ಟು ಕಡೆಯಿಂದ ನಂತೂರು ಕಡೆಗೆ ವೇಗವಾಗಿ ಬಂದ ಬೈಕ್ ಇಬ್ಬರಿಗೂ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಜ್ಯೋತಿ, ನಂದಿನಿ ಹಾಗೂ ಬೈಕ್ ಸವಾರರು ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಜ್ಯೋತಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಚಿಕ್ಕಮಗಳೂರಿನ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯಕ್ಕೆ ಸೇರಿದ ಜ್ಯೋತಿ ಅವರ ಕುಟುಂಬ ಹಲವು ವರ್ಷಗಳಿಂದ ಮಂಗಳೂರಿನ ಕಣ್ಣೂರಿನಲ್ಲಿ ನೆಲೆಸಿದೆ. ನೇತ್ರಾವತಿ ನದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿದು ಜೀವನ ಸಾಗಿಸುತ್ತಿರುವ ಬಡ ಕುಟುಂಬದಲ್ಲಿ ಜ್ಯೋತಿ ಹಿರಿಯ ಪುತ್ರಿಯಾಗಿದ್ದರು. ಕಷ್ಟದಲ್ಲೇ ಬೆಳೆದು ನರ್ಸ್ ಆಗಿ ಕುಟುಂಬಕ್ಕೆ ಆಸರೆಯಾಗಬೇಕೆಂಬ ಅವರ ಕನಸು ಕಮರಿಹೋಗಿರುವುದಕ್ಕೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.


