ಮಂಗಳೂರು: ಎಂಡಿಎಂಎ ಮಾದಕ ವಸ್ತು ಹೊಂದಿದ್ದ ಆರೋಪದ ಮೇಲೆ ಕಾವೂರು ಠಾಣಾ ಪೊಲೀಸರು ಯುವಕನೋರ್ವನನ್ನು ಮಂಗಳವಾರ ಬಂಧಿಸಿದ್ದಾರೆ.
ಕೋಟೆಕಾರ್ ಅಜ್ಜಿನಡ್ಕ ನಿವಾಸಿ ಮುಹಮ್ಮದ್ ಇರ್ಫಾನ್ ಎ.ಕೆ. (26) ಬಂಧಿತ ಆರೋಪಿ.
ಆತನಿಂದ 16 ಗ್ರಾಂ ತೂಕದ ಸುಮಾರು ₹1.60 ಲಕ್ಷ ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆ.29ರಂದು ಮರಕಡ ಗ್ರಾಮದ ಬೊಂದೇಲ್‌ನಿಂದ ಮೂಡುಶೆಡ್ಡೆ ಕಡೆಗೆ ತೆರಳುವ ರಸ್ತೆಯ ಬಳಿ ಇರ್ಫಾನ್ ಅನುಮಾನಾಸ್ಪದವಾಗಿ ನಿಂತಿದ್ದ. ಈ ವೇಳೆ ಆತನನ್ನು ವಿಚಾರಣೆ ನಡೆಸಿದಾಗ ಮಾದಕ ವಸ್ತು ಹೊಂದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.128/2026ರಂತೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ ಈ ಹಿಂದೆಯೇ ಉಳ್ಳಾಲ ಠಾಣೆಯಲ್ಲಿ ಕಳ್ಳತನ ಹಾಗೂ ಗಾಂಜಾ ಸೇವನೆ, ಪುಂಜಾಲಕಟ್ಟೆ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.


