ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನರ ದಶಕಗಳ ಸುದೀರ್ಘ ಹೋರಾಟ ಮತ್ತು ಕನಸಿಗೆ ಕೊನೆಗೂ ಫಲ ಸಿಕ್ಕಿದೆ. ಪ್ರಸ್ತುತ ಕೇರಳದ ಪಾಲಕ್ಕಾಡ್ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿರುವ ಮಂಗಳೂರು ರೈಲ್ವೆ ಶೀಘ್ರದಲ್ಲೇ ಸಂಪೂರ್ಣವಾಗಿ ಕರ್ನಾಟಕದ ಮೈಸೂರು ರೈಲ್ವೆ ವಿಭಾಗದ ತೆಕ್ಕೆಗೆ ಬರಲಿದೆ. ಮೂಲಗಳ ಪ್ರಕಾರ ಸೆಪ್ಟೆಂಬರ್ 30ರ ಮಧ್ಯರಾತ್ರಿಯಿಂದಲೇ ಈ ಐತಿಹಾಸಿಕ ಬದಲಾವಣೆ ಜಾರಿಗೆ ಬರಲಿದೆ.
ಈ ನೂತನ ನಿರ್ಧಾರದಿಂದಾಗಿ ಮಂಗಳೂರಿನಿಂದ ಉಳ್ಳಾಲದವರೆಗಿನ ರೈಲು ಮಾರ್ಗ ಮತ್ತು ನಿಲ್ದಾಣಗಳು ಮೈಸೂರು ವಿಭಾಗದ ನೇರ ಅಧೀನಕ್ಕೆ ಒಳಪಡಲಿವೆ. ಅಲ್ಲದೆ, ಇದುವರೆಗೆ ಪಡೀಲ್‌ನಲ್ಲಿದ್ದ ರೈಲ್ವೇ ಇಂಟರ್‌ಚೇಂಜ್ ಪಾಯಿಂಟ್ (Interchange Point) ಇನ್ಮುಂದೆ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ.
ಮಂಗಳೂರು ರೈಲ್ವೆ ವಲಯವನ್ನು ಕೇರಳದ ವಿಭಾಗದಿಂದ ಮುಕ್ತಿಗೊಳಿಸಿ ಕರ್ನಾಟಕದ ವ್ಯಾಪ್ತಿಗೆ ಸೇರಿಸಬೇಕೆಂಬ ಬೇಡಿಕೆ ಕರಾವಳಿ ಭಾಗದಲ್ಲಿ ದಶಕಗಳಿಂದ ಇತ್ತು. ಈ ಬದಲಾವಣೆಯಿಂದಾಗಿ ಕರಾವಳಿ ಭಾಗದಲ್ಲಿ ಹೊಸ ರೈಲುಗಳ ಸೇರ್ಪಡೆ, ಮೂಲಸೌಕರ್ಯ ವಿಸ್ತರಣೆ ಮತ್ತು ಪ್ರಯಾಣಿಕರ ಅನುಕೂಲಗಳಿಗೆ ಹೆಚ್ಚಿನ ವೇಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.


