Wednesday, September 9, 2026
HomeUncategorizedಬೆಳ್ತಂಗಡಿ; ಮೊಗ್ರು ಶ್ರೀರಾಮ ಶಿಶುಮಂದಿರ: 5ನೇ ವರ್ಷದ ಶ್ರೀ ಕೃಷ್ಣೋತ್ಸವ ಹಾಗೂ ವಿದ್ಯಾಮಂದಿರ, ಅಡುಗೆ ಕೊಠಡಿ...

ಬೆಳ್ತಂಗಡಿ; ಮೊಗ್ರು ಶ್ರೀರಾಮ ಶಿಶುಮಂದಿರ: 5ನೇ ವರ್ಷದ ಶ್ರೀ ಕೃಷ್ಣೋತ್ಸವ ಹಾಗೂ ವಿದ್ಯಾಮಂದಿರ, ಅಡುಗೆ ಕೊಠಡಿ ಉದ್ಘಾಟನೆ

- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಜೈ ಶ್ರೀರಾಮ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ-ಮುಗೇರಡ್ಕ ಇದರ ಶ್ರೀ ರಾಮ ಶಿಶು ಮಂದಿರದ 5ನೇ ವರ್ಷದ ಶ್ರೀ ಕೃಷ್ಣೋತ್ಸವ, ‘ಕಾಶಿ ಶೆಟ್ಟಿ ವಿದ್ಯಾಮಂದಿರ’ ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೊಠಡಿಯ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 6 ರಂದು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ನವಶಕ್ತಿ ಗುರುವಾಯನಕೆರೆಯ ಶಶಿಧರ ಶೆಟ್ಟಿಯವರು, ಶಿಶುಮಂದಿರದ ಧಾರ್ಮಿಕ ಶಿಕ್ಷಣ ಮತ್ತು ವ್ಯವಸ್ಥೆಯನ್ನು ಶ್ಲಾಘಿಸಿದರು. ತಮ್ಮ ತಾಯಿ ಕಾಶಿ ಶೆಟ್ಟಿಯವರ ಸ್ಮರಣಾರ್ಥ ಈ ಕೊಡುಗೆ ನೀಡಿದ್ದು, ಮುಂದಿನ ಅಭಿವೃದ್ಧಿ ಹಾಗೂ ಕ್ರೀಡಾ ವ್ಯವಸ್ಥೆಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಟ್ರಸ್ಟ್‌ನ ಗೌರವಾಧ್ಯಕ್ಷ ಉದಯ ಭಟ್ ಕೊಳಬ್ಬೆ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ದೇವಪ್ರಸಾದ್ ಗೌಡ ಬರೆಮೇಲು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪದ್ಮುಂಜ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಗೌಡ ಅಂತರ, ಟ್ರಸ್ಟ್ ಅಧ್ಯಕ್ಷ ಅಶೋಕ ಬರುಂಗುಡೇಲು ಹಾಗೂ ಮಹಿಳಾ ಮಂಡಲ ಅಧ್ಯಕ್ಷೆ ದೇಜಶ್ರೀ ಕೀಲಾರು ಉಪಸ್ಥಿತರಿದ್ದರು.

ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಬಾಲಕೃಷ್ಣ ತೊಟ್ಟಿಲ ಸಂಭ್ರಮ, ಕೃಷ್ಣ-ರಾಧಾ ವೇಷಭೂಷಣ ಸ್ಪರ್ಧೆ, ನೃತ್ಯ ಹಾಗೂ ಸಾರ್ವಜನಿಕರಿಗಾಗಿ ಮೊಸರು ಕುಡಿಕೆ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

ದಿವ್ಯಶ್ರೀ ಪದ್ಮುಂಜ ಪ್ರಾರ್ಥಿಸಿ, ಪುಷ್ಪಲತಾ ಮಾತಾಜಿ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನವ್ಯಶ್ರೀ ಧನ್ಯವಾದ ಸಮರ್ಪಿಸಿ, ಭರತೇಶ್ ಗೌಡ ಪುಣ್ಕೆದಡಿ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭಿಮಾನಿಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!