ಮಂಗಳೂರು: 2002ರ ಮತದಾರರ ಪಟ್ಟಿಯ ಹೆಸರು ಹಾಗೂ ಹಾಲಿ ದಾಖಲೆಗಳಲ್ಲಿನ ಹೆಸರಿನ ನಡುವೆ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ನೋಟಿಸ್ ನೀಡಿದ್ದ ಚುನಾವಣಾ ಆಯೋಗ, ಅದೇ ದಿನ ದಾಖಲೆ ಪರಿಶೀಲಿಸಿ ಸಮಸ್ಯೆ ಬಗೆಹರಿಸಿದೆ.
ಹಳೆಯ ಮತದಾರರ ಪಟ್ಟಿಯಲ್ಲಿ ಕೇವಲ ‘ಹಾಜಬ್ಬ’ ಎಂದಷ್ಟೇ ನಮೂದಾಗಿದ್ದು, ಆಧಾರ್, ಪಾಸ್ಪೋರ್ಟ್ ಹಾಗೂ ರೇಷನ್ ಕಾರ್ಡ್ಗಳಲ್ಲಿ ‘ಹರೇಕಳ ಹಾಜಬ್ಬ’ ಎಂದು ನಮೂದಾಗಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಇದು ಗಮನಕ್ಕೆ ಬಂದಿದ್ದರಿಂದ, ಸೆಪ್ಟೆಂಬರ್ 11 ರಂದು ದಾಖಲೆಗಳೊಂದಿಗೆ ಹಾಜರಾಗುವಂತೆ ಆಯೋಗ ನೋಟಿಸ್ ನೀಡಿತ್ತು.
ಆದರೆ, ವಿಚಾರ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಪಂದಿಸಿದ ಚುನಾವಣಾಧಿಕಾರಿಗಳು, ಅಂದೇ ದಾಖಲೆಗಳನ್ನು ಪರಿಶೀಲಿಸಿ ಹೆಸರಿನಲ್ಲಿದ್ದ ವ್ಯತ್ಯಾಸವನ್ನು ಸರಿಪಡಿಸಿದ್ದಾರೆ. ಕಿತ್ತಳೆ ಹಣ್ಣು ಮಾರಾಟ ಮಾಡುತ್ತಲೇ ಬಡ ಮಕ್ಕಳ ಶಿಕ್ಷಣಕ್ಕೆ ಶಾಲೆ ಕಟ್ಟಿ ಸಮಾಜ ಸೇವೆಗೈದ ಹಾಜಬ್ಬ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಉಲ್ಲೇಖಾರ್ಹ.


