ಹೈದರಾಬಾದ್: ಹಜ್ ಯಾತ್ರೆಗೆ ತೆರಳುತ್ತಿದ್ದ ದಂಪತಿ ಬಸ್ನಲ್ಲಿ ಮರೆತು ಬಿಟ್ಟು ಹೋಗಿದ್ದ ₹3 ಲಕ್ಷ ನಗದನ್ನು ಮರಳಿಸುವ ಮೂಲಕ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಹಿಳಾ ಕಂಡಕ್ಟರ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಶಾದ್ನಗರ ಮೂಲದ ಉದ್ಯಮಿ ಜಹಾಂಗೀರ್ ಹಾಗೂ ಅವರ ಪತ್ನಿ ಹೈದರಾಬಾದ್ಗೆ ಪ್ರಯಾಣಿಸುತ್ತಿದ್ದರು. ಅಫ್ಜಲ್ಗಂಜ್ನಲ್ಲಿ ಬಸ್ನಿಂದ ಇಳಿದು ನಾಂಪಲ್ಲಿಯತ್ತ ತೆರಳಿದ ಅವರಿಗೆ, ಬಸ್ನಲ್ಲಿ ಹಣವಿದ್ದ ಚೀಲ ಮರೆತು ಬಿಟ್ಟಿರುವುದು ಅರಿವಿಗೆ ಬಂದಿದೆ. ಗಾಬರಿಗೊಂಡ ದಂಪತಿ ತಕ್ಷಣ ಬಸ್ ನಿಲ್ದಾಣಕ್ಕೆ ಓಡೋಡಿ ಬಂದಿದ್ದಾರೆ.
ಈ ನಡುವೆ ಬಸ್ನಲ್ಲಿ ಪರಿಶೀಲನೆ ನಡೆಸುತ್ತಿದ್ದ ಕಂಡಕ್ಟರ್ ಸರಿತಾ ಅವರಿಗೆ ಅನಾಥವಾಗಿ ಬಿದ್ದಿದ್ದ ಚೀಲ ಕಂಡುಬಂದಿದೆ. ತಕ್ಷಣ ಅವರು ಚಾಲಕ ನರಸಿಂಹನ್ ಅವರಿಗೆ ಮಾಹಿತಿ ನೀಡಿ, ಹಣದ ಚೀಲವನ್ನು ಭದ್ರವಾಗಿ ತೆಗೆದಿರಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಜಹಾಂಗೀರ್ ದಂಪತಿಯನ್ನು ಖಾತರಿಪಡಿಸಿಕೊಂಡು, ಪೂರ್ತಿ ₹3 ಲಕ್ಷ ಹಣವನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ. ಬಸ್ ಸಿಬ್ಬಂದಿಯ ಈ ಕರ್ತವ್ಯಪ್ರಜ್ಞೆ ಹಾಗೂ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


