
ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಾಸವಿದ್ದ ಬ್ಯಾರಕ್ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದ್ದು, ಜೈಲಾಡಳಿತದ ಭದ್ರತಾ ವೈಫಲ್ಯವನ್ನು ಮತ್ತೆ ಸಾಬೀತುಪಡಿಸಿದೆ.
ಮಂಗಳವಾರ ಮಧ್ಯಾಹ್ನ ಸಿಸಿಬಿ (CCB) ಪೊಲೀಸರ ತಂಡ ಕೈಗೊಂಡ ಹಠಾತ್ ತಪಾಸಣೆ ವೇಳೆ ಈ ಅಕ್ರಮ ಬಯಲಾಗಿದೆ. ಅತ್ಯಂತ ಸೂಕ್ಷ್ಮ ಹಾಗೂ ಹೈ-ಸೆಕ್ಯುರಿಟಿ ವಲಯವೆನಿಸಿದ ಕಾರಾಗೃಹದೊಳಗೆ ನಿಷೇಧಿತ ವಿದ್ಯುನ್ಮಾನ ಸಾಧನ ಪ್ರವೇಶಿಸಿದ್ದು ಹೇಗೆ ಎಂಬ ಪ್ರಶ್ನೆ ಹುಟ್ಟುಹಾಕಿದ್ದು, ಜೈಲಿನಲ್ಲಿ ಪ್ರಭಾವಿ ವ್ಯಕ್ತಿಗಳಿಗೆ ಪ್ರತ್ಯೇಕ ವಿಐಪಿ ಆತಿಥ್ಯ ದೊರೆಯುತ್ತಿದೆ ಎಂಬ ಆರೋಪಕ್ಕೆ ಈ ಘಟನೆ ಗಟ್ಟಿಯಾದ ಸಾಕ್ಷ್ಯ ಒದಗಿಸಿದೆ.
ವಿಚಾರಣೆ ವೇಳೆ ತಿಳಿದುಬಂದಂತೆ, ಪ್ರಜ್ವಲ್ ರೇವಣ್ಣ ಅವರೊಂದಿಗೆ ಪ್ರತಾಪ್ ರೈ ಎಂಬ ಮತ್ತೊಬ್ಬ ಸಜಾಬಂಧಿ ಒಂದೇ ಬ್ಯಾರಕ್ನಲ್ಲಿದ್ದನು. ಅಧಿಕಾರಿಗಳು ದಾಳಿ ನಡೆಸಿದಾಗ ಪ್ರಜ್ವಲ್ ರೇವಣ್ಣ ಘಟನೆಗೂ ತಮಗೂ ಸಂಬಂಧವಿಲ್ಲದಂತೆ ಮೌನಕ್ಕೆ ಶರಣಾಗಿದ್ದರು ಎನ್ನಲಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರತಾಪ್ ರೈ ಅವರನ್ನು ಮೊದಲ ಆರೋಪಿ ಹಾಗೂ ಪ್ರಜ್ವಲ್ ರೇವಣ್ಣ ಅವರನ್ನು ಎರಡನೇ ಆರೋಪಿ ಮಾಡಲಾಗಿದೆ.
ವಶಪಡಿಸಿಕೊಂಡಿರುವ ಮೊಬೈಲ್ ಅನ್ನು ವಾಸ್ತವವಾಗಿ ಪ್ರಜ್ವಲ್ ಬಳಸುತ್ತಿದ್ದರೇ ಅಥವಾ ಪ್ರತಾಪ್ ರೈ ಹೆಸರಿನಲ್ಲಿ ತರಿಸಿಕೊಳ್ಳಲಾಗಿತ್ತೇ ಎಂಬುದರ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹಿಂದೆ ಕೂಡ ರೌಡಿಶೀಟರ್ಗಳು ಹಾಗೂ ರಾಜಕಾರಣಿಗಳಿಗೆ ಜೈಲಿನೊಳಗೆ ವಿಶೇಷ ರಿಯಾಯಿತಿಗಳನ್ನು ನೀಡಿದ್ದ ಪ್ರಕರಣಗಳು ಚರ್ಚೆಯಾಗಿದ್ದವು. ಈಗ ಮತ್ತೆ ಹೈಪ್ರೊಫೈಲ್ ಕೈದಿಯ ಸೆಲ್ನಲ್ಲೇ ಫೋನ್ ಸಿಕ್ಕಿರುವುದು ಕಾರಾಗೃಹದ ಮೇಲಧಿಕಾರಿಗಳ ಶಿಸ್ತು ಮತ್ತು ಮೇಲ್ವಿಚಾರಣೆಯನ್ನು ಪ್ರಶ್ನಿಸುವಂತೆ ಮಾಡಿದೆ.


