ಕಾರ್ಕಳ: ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಮಂಗಳವಾರ (ಸೆ.29) ಮಧ್ಯಾಹ್ನ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆ ಸ್ವರ್ಣ ನದಿಯಲ್ಲಿ ನಡೆದಿದೆ.
ಮೃತರನ್ನು ಹಿರ್ಗಾನ ಗ್ರಾಮದ ಪೇಂಟಿಂಗ್ ಕಾರ್ಮಿಕರಾದ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (23) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ: ಮಂಗಳವಾರ ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಭರತ್ ಹಾಗೂ ಹರ್ಷನ್ ಅವರು ಇತರ ಮೂವರು ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದರು. ಹಿರ್ಗಾನದ ಮಂಗಿಲಾರು ಪ್ರದೇಶದಿಂದ ಸುಮಾರು 2 ಕಿ.ಮೀ. ದುರ್ಗಮ ದಾರಿಯಲ್ಲಿ ನಡೆದು ಹೆರ್ಮುಂಡೆ ನದಿ ತಲುಪಿದ್ದರು. ಸ್ನೇಹಿತರೊಂದಿಗೆ ಈಜುತ್ತಿದ್ದ ವೇಳೆ ಭರತ್ ಹಾಗೂ ಹರ್ಷನ್ ನೀರಿನ ಆಳಕ್ಕೆ ತೆರಳಿದ್ದು, ಈಜಲು ಸಾಧ್ಯವಾಗದೆ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ವಾಹನ ಸಂಚಾರಕ್ಕೆ ಸೂಕ್ತ ರಸ್ತೆ ಇಲ್ಲದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಸಲಕರಣೆಗಳೊಂದಿಗೆ ಸುಮಾರು 3 ಕಿ.ಮೀ. ನಡೆದು ಸ್ಥಳಕ್ಕೆ ತೆರಳಬೇಕಾಯಿತು. ಅಗ್ನಿಶಾಮಕ ದಳದ ಠಾಣಾಧಿಕಾರಿ ಸಂಜೀವ ದೇವಾಡಿಗ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ರೂಪೇಶ್, ಸುರೇಶ್, ನಿತ್ಯಾನಂದ, ದಿನೇಶ್, ಮುಜಾಮಿಲ್ ಹಾಗೂ ಚಾಲಕ ಶಿವಾನಂದ ಪಾಲ್ಗೊಂಡಿದ್ದರು.
ಮೃತ ಭರತ್ ಪೂಜಾರಿ ಪೇಂಟಿಂಗ್ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು. ಸ್ವಂತ ಹೊಸ ಮನೆ ನಿರ್ಮಿಸುವ ಕನಸು ಹೊಂದಿದ್ದ ಅವರು ಈಗಾಗಲೇ ಮನೆ ಕಾಮಗಾರಿ ಆರಂಭಿಸಿದ್ದರು. ಮನೆ ಸ್ಲಾಬ್ ಹಂತ ತಲುಪಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಗೃಹಪ್ರವೇಶ ನಡೆಸುವ ಯೋಜನೆಯಲ್ಲಿದ್ದರು. ಆದರೆ ದುರಂತ ಘಟನೆಯಲ್ಲಿ ಭರತ್ ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.


