
ಕಡಬ: ಜಲಪಾತಕ್ಕೆ ತೆರಳಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕ ಹಾಗೂ ಆತನ ಸಹಪಾಠಿಗಳ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಜೀವಬೆದರಿಕೆ ಒಡ್ಡಿದ ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ದೂರುದಾರ ಅಪ್ರಾಪ್ತ ಬಾಲಕ ತನ್ನ ನಾಲ್ವರು ಸಹಪಾಠಿಗಳೊಂದಿಗೆ ಆಗಸ್ಟ್ 3 ರಂದು ಬೆಳಿಗ್ಗೆ ಕಡಬ ತಾಲೂಕಿನ ಕುಂಡಡ್ಕ ಫಾಲ್ಸ್ಗೆ ತೆರಳಿ ಆಟವಾಡುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ಆರೋಪಿಗಳಾದ ರೋಹಿತ್, ದೇವಿಪ್ರಸಾದ್, ಚಂದನ್, ಉಮೇಶ್ ಹಾಗೂ ವಿದ್ಯಾರ್ಥಿನಿಯೊಬ್ಬಳ ತಂದೆ ಜೊತೆಗೂಡಿ ದೂರುದಾರ ಬಾಲಕನಿಗೆ ಅಸಭ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲದೆ ದೂರುದಾರ ಹಾಗೂ ಆತನ ಇಬ್ಬರು ಸಹಪಾಠಿಗಳ ಮೇಲೆ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಆಗಸ್ಟ್ 11 ರಂದು ನೀಡಿದ ದೂರಿನನ್ವಯ ಕಡಬ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ವಿವಿಧ ಕಲಂಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ (SC/ST Atrocities Act) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


