ಮಂಗಳೂರು: ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ, ಕೃಷಿ ಉದ್ಯಮಶೀಲತೆ ಹಾಗೂ ನೇರ ಮಾರುಕಟ್ಟೆ ಅವಕಾಶಗಳನ್ನು ಪರಿಚಯಿಸುವ ಮೂರು ದಿನಗಳ ‘ಕೃಷಿ ಹಬ್ಬ–ಕೃಷಿ ಉತ್ಸವ 2026’ ಅ.2ರಿಂದ 4ರವರೆಗೆ ಕುಲಶೇಖರದ ಕಾರ್ಡೆಲ್ ಮೈದಾನ ಮತ್ತು ಸಭಾಂಗಣದಲ್ಲಿ ನಡೆಯಲಿದೆ.
ಕಿಸಾನ್ ಸೇವಾ ಪ್ರತಿಷ್ಠಾನವು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿರುವ ಉತ್ಸವದಲ್ಲಿ ಕೃಷಿ ಯಂತ್ರೋಪಕರಣ, ಸಿರಿಧಾನ್ಯ, ಸಸ್ಯ-ನರ್ಸರಿ, ಜೇನು ಸಾಕಣೆ, ಸಾವಯವ ಕೃಷಿ, ರೈತರ ಮಾರುಕಟ್ಟೆ, ಆಹಾರ, ಮೀನುಗಾರಿಕೆ ಹಾಗೂ ಕೃಷಿ-ಉದ್ಯಮಗಳ ಪ್ರದರ್ಶನ ನಡೆಯಲಿದೆ.
ರೈತರು, ಕೃಷಿ ಉದ್ಯಮಿಗಳು ಹಾಗೂ ಯುವಕರಿಗೆ ತಾಂತ್ರಿಕ ಮಾರ್ಗದರ್ಶನ ನೀಡಲು ಮಿಶ್ರ ಕೃಷಿ, ಹನಿ ನೀರಾವರಿ, ಮನೆ ತೋಟಗಾರಿಕೆ, ಜಲಾನಯನ ನಿರ್ವಹಣೆ, ಮೀನು ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಜೇನು ಸಾಕಣೆ ಕುರಿತು ತಜ್ಞರ ತರಬೇತಿ ಹಾಗೂ ಸಂವಾದಗಳು ನಡೆಯಲಿವೆ.
ಅ.2ರಂದು ಬೆಳಗ್ಗೆ 11ಕ್ಕೆ ಮಳಿಗೆಗಳ ಉದ್ಘಾಟನೆ ಹಾಗೂ ಸಂಜೆ 5.30ಕ್ಕೆ ಅಧಿಕೃತ ಉದ್ಘಾಟನಾ ಸಮಾರಂಭ ನಡೆಯಲಿದೆ. ಮೂರು ದಿನಗಳ ಕಾಲ ಬೆಳಗ್ಗೆ 9.30ರಿಂದ ರಾತ್ರಿ 8.30ರವರೆಗೆ ಸಾರ್ವಜನಿಕರಿಗೆ ಉತ್ಸವ ಮುಕ್ತವಾಗಿರಲಿದೆ.


