
ನವದೆಹಲಿ: ಡಾರ್ಕ್ ಪ್ಯಾಟರ್ನ್ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಗ್ರಾಹಕರನ್ನು ವಂಚಿಸುತ್ತಿದ್ದ ಆರೋಪದಡಿ ಕಂಪನಿಗಳಿಗೆ
ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ನಿರ್ದೇಶನದಂತೆ ಒಂಬತ್ತು ಕಂಪನಿಗಳಿಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ದಂಡ ವಿಧಿಸಿದೆ.
ಡಿಜಿಟಲ್ ವಾಣಿಜ್ಯ ವೇದಿಕೆಗಳಲ್ಲಿ ಡಾರ್ಕ್ ಪ್ಯಾಟರ್ನ್ ಪ್ರದರ್ಶಿಸಿ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಒಂಬತ್ತು ಡಿಜಿಟಲ್ ವೇದಿಕೆಗಳಿಗೆ ಒಟ್ಟು 20 ಲಕ್ಷ ರೂಪಾಯಿ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ದಂಡ ವಿಧಿಸಿದೆ.
ಕಡಿಮೆ ದರ ತೋರಿಸಿ ಬಳಿಕ ನಿರ್ವಹಣೆ ಶುಲ್ಕ ಮತ್ತು ಸದಸ್ಯತ್ವ ಶುಲ್ಕವೆಂದು ಹೆಚ್ಚಿನ ಹಣ ಪಡೆಯುತ್ತಿದ್ದ ಕಾರಣ ಜೆಪ್ಟೋ ಕಂಪನಿಗೆ ಏಳು ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ತನ್ನ ಪಿಡಬ್ಲ್ಯು ಫೌಂಡೇಶನ್ಗೆಂದು 10 ರೂಪಾಯಿ ದೇಣಿಗೆ ಮೊದಲೇ ಪಡೆದುಕೊಳ್ಳುತ್ತಿರುವುದು ಮತ್ತು ಉಚಿತ ಕೋರ್ಸ್‌ಗಳಿಗೆ ವೈಯಕ್ತಿಕ ಮಾಹಿತಿ ಕಡ್ಡಾಯಗೊಳಿಸಿದ್ದ ಕಾರಣದಿಂದಾಗಿಆನ್‌ಲೈನ್ ಶಿಕ್ಷಣ ಸಂಸ್ಥೆ ಫಿಸಿಕ್ಸ್ ವಾಲಾ ಕಂಪನಿಗೆ ಐದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಆಟೋಮ್ಯಾಟಿಕ್ ಲಾಯಲ್ಟಿ ಪ್ರೋಗ್ರಾಮ್ ನೋಂದಣಿ ಮತ್ತು ಪ್ರಚಾರ ಸಂದೇಶಗಳಿಗೆ ಬಲವಂತದ ಸಮ್ಮತಿ ಪಡೆಯುತ್ತಿದ್ದ ಕಾರಣದಿಂದ ಸ್ಪೈಸ್ ಜೆಟ್ ಸಂಸ್ಥೆಗೆ ಒಂದು ಲಕ್ಷ ರೂಪಾಯಿ ದಂಡ ಹಾಕಲಾಗಿದ್ದು, ಅನುಜ್ ಜಿಂದಾಲ್ ಕಂಪನಿಗೆ ಮೂರು ಲಕ್ಷ ರೂಪಾಯಿ, ಫಸ್ಟ್ ಕ್ರೈ ಕಂಪನಿಗೆ ಎರಡು ಲಕ್ಷ ರೂಪಾಯಿ, ಫಾರ್ಮ್ ಈಸಿ ಸಂಸ್ಥೆ ಮತ್ತು ಮೆಕಾಫಿ ಸಂಸ್ಥೆಗಳಿಗೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಇದೇ ವೇಳೆ, ಇಂಡಿಗೋ ಆ್ಯಪ್‌ನಲ್ಲಿ ವಿಮೆ ಪಡೆಯದ ಕಾರಣಕ್ಕೆ ಗ್ರಾಹಕರನ್ನು ಗಾಬರಿಪಡಿಸುವಂತೆ ನೋ ಐ ವಿಲ್ ಟೇಕ್ ರಿಸ್ಕ್ ಸಂದೇಶ ನೀಡುತ್ತಿದ್ದನ್ನು ಬದಲಾಯಿಸಲು ಸೂಚನೆ ನೀಡಿರುವ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ, ಬುಕ್ ಮೈ ಶೋ ಕಂಪನಿಗೆ ಗ್ರಾಹಕರು ಹಣ ಪಾವತಿಸುವಾಗ ಬುಕ್ ಎ ಸ್ಮೈಲ್ ನಿಧಿಗೆ ಒಂದು ರೂಪಾಯಿ ಸ್ವಯಂ ದೇಣಿಗೆ ಸಂಗ್ರಹವನ್ನು ತೆಗೆದು ಹಾಕುವಂತೆ ಸೂಚನೆ ನೀಡಿದೆ.
2023ರಲ್ಲೇ ಹದಿಮೂರು ಮಾದರಿಯ ಡಾರ್ಕ್ ಪ್ಯಾಟರ್ನ್‌ಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.


