Thursday, August 6, 2026
Homeತಾಜಾ ಸುದ್ದಿತಂದೆಯ ಅಂತ್ಯಸಂಸ್ಕಾರವನ್ನೂ ವಿಡಿಯೋ ಕಾಲ್‌ನಲ್ಲಿ ನೋಡಿ ಮುಗಿಸಿದ ಪುತ್ರಿಯರು: ಕಣ್ಣೀರು ತರಿಸುವ ಕರುಣಾಜನಕ ಘಟನೆ

ತಂದೆಯ ಅಂತ್ಯಸಂಸ್ಕಾರವನ್ನೂ ವಿಡಿಯೋ ಕಾಲ್‌ನಲ್ಲಿ ನೋಡಿ ಮುಗಿಸಿದ ಪುತ್ರಿಯರು: ಕಣ್ಣೀರು ತರಿಸುವ ಕರುಣಾಜನಕ ಘಟನೆ

- Advertisement -
- Advertisement -

ಹರಿಯಾಣ: ತಮ್ಮ ಇಡೀ ಜೀವನವನ್ನು ಮೂವರು ಹೆಣ್ಣುಮಕ್ಕಳನ್ನ ಬೆಳೆಸಲು ಹಾಗೂ ಅವರಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಡಿಪಾಗಿಟ್ಟಿದ್ದ ವೃದ್ಧ ತಂದೆಯೊಬ್ಬರು ವೃದ್ಧಾಶ್ರಮದಲ್ಲಿ ಅನಾಥರಾಗಿ ಕೊನೆಯುಸಿರೆಳೆದಿದ್ದಾರೆ. ಅಂತಿಮ ದರ್ಶನಕ್ಕೂ ಬರಲಾಗದ ಪುತ್ರಿಯರು ವಿಡಿಯೋ ಕಾಲ್ ಮೂಲಕ ಅಂತ್ಯಸಂಸ್ಕಾರ ವೀಕ್ಷಿಸಿದ ಅಮಾನವೀಯ ಘಟನೆ ಹರ್ಯಾಣದ ಸೋನಿಪತ್‌ನಲ್ಲಿ ನಡೆದಿದೆ.

ಮೂಲತಃ ಮುಂಬೈನ ಜವಳಿ ಉದ್ಯಮಿಯಾಗಿದ್ದ ಶಿವಚರಣ್ ರಾಮ್ ರತನ್ ಗುಪ್ತಾ ಎಂಬುವವರೇ ಮೃತ ದುರ್ದೈವಿ. ಇವರ ಪತ್ನಿ ಮೀನಾ ಕೂಡ ಹಿಂದೆ ಇದೇ ವೃದ್ಧಾಶ್ರಮದಲ್ಲಿ ಮೃತಪಟ್ಟಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗುಪ್ತಾ ಅವರು ಕಳೆದ ಎರಡು ವರ್ಷಗಳಿಂದ ಸೋನಿಪತ್‌ನ ವೃದ್ಧಾಶ್ರಮದಲ್ಲಿದ್ದರು. ಮಂಗಳವಾರ ಮುಂಜಾನೆ 3:30 ರ ಸುಮಾರಿಗೆ ಅವರು ನಿಧನರಾಗಿದ್ದಾರೆ.

ಮೃತರ ಮೂವರು ಪುತ್ರಿಯರಲ್ಲಿ ಹಿರಿಯ ಮಗಳು ಅನಿತಾ ನೇಪಾಳದಲ್ಲಿ ಶಿಕ್ಷಕಿಯಾಗಿದ್ದರೆ, ದ್ವಿತೀಯ ಮಗಳು ನಿಶಾ ಉತ್ತರ ಪ್ರದೇಶದ ಅಜಂಘಡ್‌ನಲ್ಲಿದ್ದಾರೆ. ಕಿರಿಯ ಮಗಳು ಪ್ರಿಯಾ ಮುಂಬೈನಲ್ಲಿ ನೆಲೆಸಿದ್ದಾರೆ. ತಮ್ಮ ಮಗಳಂದಿರ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದ್ದ ಗುಪ್ತಾ, ಅವರ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತಿದ್ದರು. ಆದರೆ ತಂದೆಯ ನಿಧನದ ಸುದ್ದಿ ತಿಳಿದರೂ ತಮಗೆ ಬರಲು ಸಮಯವಿಲ್ಲ ಎಂದು ಪುತ್ರಿಯರು ತಿಳಿಸಿದ್ದಾರೆ.

ಕೊನೆಗೆ ವೃದ್ಧಾಶ್ರಮದ ಆಡಳಿತ ಮಂಡಳಿ ಹಾಗೂ ಸ್ಥಳೀಯ ನಿವಾಸಿಗಳ ನೆರವಿನಿಂದ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ನೇಪಾಳದಲ್ಲಿರುವ ಮಗಳು ಅನಿತಾ ಆನ್‌ಲೈನ್ ಮೂಲಕ 5,100 ರೂಪಾಯಿ ಕಳುಹಿಸಿ ತಂದೆಯ ಅಂತ್ಯಸಂಸ್ಕಾರ ನೆರವೇರಿಸುವಂತೆ ಕೋರಿದ್ದರೆ, ಮಕ್ಕಳೆಲ್ಲರೂ ವಿಡಿಯೋ ಕರೆ ಮೂಲಕವೇ ಅಂತಿಮ ಸಂಸ್ಕಾರ ವೀಕ್ಷಿಸಿದರು.

ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ಮಾತನಾಡಿ, “ಗುಪ್ತಾ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ 20 ದಿನಗಳ ಹಿಂದೆಯೇ ಪುತ್ರಿಯರಿಗೆ ತಿಳಿಸಲಾಗಿತ್ತು. ಆದರೂ ಅವರು ಬರಲಿಲ್ಲ. ಅಂತ್ಯಸಂಸ್ಕಾರದ ವೇಳೆ ವಿಡಿಯೋ ಕರೆಯಲ್ಲಿದ್ದ ಮಗಳೊಬ್ಬಳು, ‘ಇನ್ನು ಎಷ್ಟು ಸಮಯ ಬೇಕಾಗುತ್ತದೆ? ನಾವು ಊಟ ಮಾಡಿ ಸ್ನಾನ ಮಾಡಬೇಕು’ ಎಂದು ಬೇಸರದಿಂದ ಕೇಳಿದ್ದರು” ಎಂದು ಅಳಲು ತೋಡಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಅಸ್ಥಿ ವಿಸರ್ಜನೆಗೂ ಬರಲು ಸಾಧ್ಯವಿಲ್ಲವೆಂದು ತಿಳಿಸಿದ ಕುಟುಂಬಸ್ಥರು, ಗಂಗಾನದಿಯಲ್ಲಿ ಅಸ್ಥಿ ವಿಸರ್ಜಿಸುವಂತೆ ಆಡಳಿತ ಮಂಡಳಿಗೆ ವಿನಂತಿಸಿದ್ದಾರೆ. ತಂದೆ ಬದುಕಿದ್ದಾಗ ಸರಿಯಾಗಿ ನೋಡಿಕೊಳ್ಳದಿದ್ದರೂ, ಮರಣೋತ್ತರವಾಗಿ ಶಿವಚರಣ್ ಅವರ ನೇತ್ರಗಳನ್ನು ದಾನ ಮಾಡಲಾಗಿದ್ದು, ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ.

- Advertisement -

Latest News

error: Content is protected !!