
ಮೈಸೂರು: ನಿನ್ನೆ ನಿಧನರಾದ ಖ್ಯಾತ ಗಾಯಕಿ ಗಾನ ಕೋಗಿಲೆ ಎಸ್ ಜಾನಕಿ ಅವರ ಅಂತ್ಯಕ್ರಿಯೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ, ಮೈಸೂರಿನ ಕಣಿಯನಹುಂಡಿಯ ತೋಟದಲ್ಲಿ ಇಂದು ನೆರವೇರಿತು.
ಕಳೆದ ನಾಲ್ಕು ವರ್ಷಗಳ ಹಿಂದೆ ಕಣಿಯನಹುಂಡಿಯಲ್ಲಿ ಎಸ್.ಜಾನಕಿ ಅವರು 2 ಎಕರೆ ಜಮೀನು ಖರೀದಿಸಿದ್ದರು. ತಮ್ಮ ಅಂತ್ಯಕ್ರಿಯೆ ಇದೇ ಜಾಗದಲ್ಲಿ ಆಗಬೇಕು ಎಂದು ಜಾನಕಿ ಬಯಸಿದ್ದರು. ಅದರಂತೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನೆರವೇರಿತು. ಅಂತ್ಯಸಂಸ್ಕಾರ ವೇಳೆ 3 ಸುತ್ತು ಕುಶಾಲತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಇತ್ತೀಚೆಗೆ ಜಾನಕಮ್ಮ ಅವರ ಪುತ್ರ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಪುತ್ರನ ಮಗಳು, ಜಾನಕಿ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಶಾಶ್ವತಿ ಕ್ರಿಯಾ ಸಮಿತಿ ವತಿಯಿಂದ ಆಗಮಿಕ ರಮೇಶ್ ಶರ್ಮ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಿದವು. ಮೊದಲಿಗೆ ಪಂಚಗವ್ಯದಿಂದ ದೇಹ ಶುದ್ದೀಕರಣ ಮಾಡಲಾಯಿತು. ಬಳಿಕ ಬ್ರಾಹ್ಮಣ ಸಂಪ್ರದಾಯದ ವಿಧಿವಿಧಾನಗಳು ನಡೆದವು. ಕಾಡು ಕಟ್ಟಿಗೆಗಳ ಜೊತೆಗೆ ಗಂಧ ಮತ್ತು ತುಳಸಿ ಕಟ್ಟಿಯಿಂದ ಚಿತೆ ನಿರ್ಮಾಣ ಮಾಡಲಾಗಿತ್ತು. ಸೂರ್ಯಾಸ್ತದ ಮುನ್ನ ಅಗ್ನಿಸ್ಪರ್ಶ ಮಾಡಲಾಯಿತು.
ಎಸ್.ಜಾನಕಿ ಅಂತ್ಯಸಂಸ್ಕಾರದ ವೇಳೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಥಳದಲ್ಲಿ ಜಮಾಯಿಸಿದ್ದರು. ನಟ-ನಟಿಯರು, ಸಚಿವರು, ಶಾಸಕರು, ಗಣ್ಯರು, ಪೊಲೀಸರು, ಜಾನಕಮ್ಮನವರ ಕುಟುಂಬಸ್ಥರು ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಅಂತ್ಯಸಂಸ್ಕಾರ ನಡೆಯಿತು.


