
ಮುಂಬೈ: ಮಹಾರಾಷ್ಟ್ರದಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಪ್ರವಾಹದ ಭೀಕರತೆಯನ್ನು ಕಣ್ಣಿಗೆ ಕಟ್ಟುವಂಥ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಹದ ನೀರಿನ ರಭಸಕ್ಕೆ ನೂರಾರು ಗ್ಯಾಸ್ ಸಿಲಿಂಡರ್‌ಗಳು ನದಿಯಲ್ಲಿ ಜಲಚರಗಳಂತೆ ತೇಲಿ ಬಂದಿರುವ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ಸಂಭವಿಸಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಳ್ಳ-ಕೊಳ್ಳಗಳು, ನದಿಗಳು ಉಕ್ಕಿ ಹರಿಯುತ್ತಿದ್ದು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಪ್ರವಾಹದ ಅಬ್ಬರಕ್ಕೆ ಸಿಲುಕಿದ ಸ್ಥಳೀಯ ಗ್ಯಾಸ್ ಏಜೆನ್ಸಿಯೊಂದರ ಗೋದಾಮಿನಲ್ಲಿದ್ದ ನೂರಾರು ಎಲ್‌ಪಿಜಿ (LPG) ಸಿಲಿಂಡರ್‌ಗಳು ನೀರಿನ ರಭಸಕ್ಕೆ ನದಿಗೆ ಕೊಚ್ಚಿ ಹೋಗಿವೆ ಎನ್ನಲಾಗಿದೆ. ಸುಮಾರು 3,000 ಗ್ಯಾಸ್ ಸಿಲಿಂಡರ್‌ಗಳು ನೀರಿನ ತೀವ್ರ ರಭಸಕ್ಕೆ ಕೊಚ್ಚಿ ಹೋಗಿದ್ದು, ಪಾತಾಲಗಂಗಾ ನದಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ.ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಪ್ಲಾಂಟ್‌ನ ರಕ್ಷಣಾ ಗೋಡೆ ಕುಸಿದಿದ್ದು, ಪ್ರವಾಹದ ನೀರು ನೇರವಾಗಿ ಆವರಣದೊಳಗೆ ನುಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಸಿಲಿಂಡರ್‌ಗಳು ಪಾತಾಲಗಂಗಾ ನದಿ ಮತ್ತು ಖಾರ್ಪಾಡಾ ಕ್ರೀಕ್‌ಗೆ ಕೊಚ್ಚಿ ಹೋಗಿವೆ ಎಂದಿದ್ದಾರೆ.
ಆತಂಕದಲ್ಲಿ ನದಿ ತೀರದ ಜನ: ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಸಿಲಿಂಡರ್‌ಗಳಲ್ಲಿ ಕೆಲವು ತುಂಬಿದ ಸಿಲಿಂಡರ್‌ಗಳಾಗಿದ್ದು, ಇವುಗಳು ಯಾವುದಾದರೂ ಬಂಡೆಗಲ್ಲು ಅಥವಾ ಗಟ್ಟಿ ವಸ್ತುವಿಗೆ ಢಿಕ್ಕಿ ಹೊಡೆದರೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬ ಭೀತಿ ಸಾರ್ವಜನಿಕರಲ್ಲಿ ಮೂಡಿದೆ. ನದಿ ತೀರದ ಗ್ರಾಮಸ್ಥರು ಈ ದೃಶ್ಯವನ್ನು ಕಂಡು ತೀವ್ರ ಆತಂಕಗೊಂಡಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ಎಚ್ಚೆತ್ತಿರುವ ಜಿಲ್ಲಾಡಳಿತ ಮತ್ತು ವಿಪತ್ತು ನಿರ್ವಹಣಾ ತಂಡಗಳು (NDRF), ಸಿಲಿಂಡರ್‌ಗಳು ಎಲ್ಲೂ ಸಿಲುಕಿ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಅವುಗಳನ್ನು ಸುರಕ್ಷಿತವಾಗಿ ದಡಕ್ಕೆ ತರಲು ಕಾರ್ಯಾಚರಣೆ ಆರಂಭಿಸಿವೆ. ಮಹಾರಾಷ್ಟ್ರದ ಪ್ರವಾಹದ ತೀವ್ರತೆಗೆ ಈ ದೃಶ್ಯ ಹಿಡಿದ ಕೈಗನ್ನಡಿಯಾಗಿದೆ.


