
ಪುತ್ತೂರು: ಯುವತಿಯೊಬ್ಬಳನ್ನು ಚಾಕು ತೋರಿಸಿ ಹಿಂಬಾಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ದಿನಾಂಕ 08.07.2026 ರಂದು ಬೆಳಿಗ್ಗೆ ಸುಮಾರು 6.45ಕ್ಕೆ ಪುತ್ತೂರಿನ ನಿವಾಸಿಯಾದ ಯುವತಿ ಕೆಲಸಕ್ಕೆ ಹೋಗುತ್ತಿದ್ದಾಗ, ತನ್ನೊಂದಿಗೆ ಕಾಲೇಜಿನಲ್ಲಿ ಓದುತ್ತಿದ್ದ ಪರಿಚಯದ ಸೊಹೈಲ್ ಎಂಬಾತ ಚಾಕು ಹಿಡಿದುಕೊಂಡು ನಿಂತಿದ್ದ. ಸೊಹೈಲ್ ಹಾಗೂ ಆತನ ನಾಲ್ವರು ಸ್ನೇಹಿತರು ವಾಹನವೊಂದರಲ್ಲಿ ತನ್ನನ್ನು ಹಿಂಬಾಲಿಸಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಅದರಂತೆ ಈ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ಬಗ್ಗೆ ಪೊಲೀಸರು ಯುವಕರನ್ನು ವಿಚಾರಣೆಗೆ ಒಳಪಡಿಸಿದಾಗ ನೈಜ ಸಂಗತಿ ಬೆಳಕಿಗೆ ಬಂದಿದೆ. ಯುವಕರು ತಾವು ಬೇಕರಿಯೊಂದರಲ್ಲಿ ಬ್ರೆಡ್ ಖರೀದಿಸಿ, ಅದಕ್ಕೆ ಚೀಸ್ ಹರಡಲು ಬೇಕರಿಯವರಿಂದಲೇ ಚಾಕು ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಆ ಚಾಕುವನ್ನು ಮರಳಿ ಬೇಕರಿಗೆ ನೀಡಲು ಹೋಗುತ್ತಿದ್ದಾಗ ಯುವತಿ ನೋಡಿರುವುದಾಗಿ ಹಾಗೂ ತಾವು ಯಾವುದೇ ಅಪರಾಧಿಕ ಕೃತ್ಯ ಎಸಗಿಲ್ಲ, ಆ ಬಳಿಕ ಎಂದಿನಂತೆ ಜಿಮ್‌ಗೆ ತೆರಳಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮುಂದುವರಿದು, “ಈ ಎಲ್ಲಾ ನೈಜ ಸಂಗತಿಗಳು ತಿಳಿದಿದ್ದರೂ ಕೂಡಾ, ಧಾರ್ಮಿಕ ದ್ವೇಷದ ಭಾವನೆಯಿಂದ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿರುವ ಮುರಳಿ ಕೃಷ್ಣ ಹಂಸತಡ್ಕ ಹಾಗೂ ಇತರರು ನಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ಯುವತಿಯ ಮೂಲಕ ಸುಳ್ಳು ಪ್ರಕರಣ ದಾಖಲಿಸಲು ಯತ್ನಿಸುತ್ತಿದ್ದಾರೆ,” ಎಂದು ಆರೋಪಿಸಿ ಯುವಕರು ಪುತ್ತೂರು ನಗರ ಪೊಲೀಸ್ ಠಾಣೆಗೆ ಪ್ರತಿದೂರು ನೀಡಿದ್ದಾರೆ.
ಇನ್ನು ಸದ್ಯ ಎರಡೂ ಕಡೆಯ ದೂರುಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬಾರದು. ಸುಳ್ಳು ಸುದ್ದಿ ಹರಡುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.


