
ಮಂಗಳೂರು: ಜಮ್ಮುವಿನಲ್ಲಿ ದೇಶದ ಭದ್ರತಾ ಸೇವೆಯಲ್ಲಿದ್ದ ಕರಾವಳಿಯ ಯೋಧನೊಬ್ಬ ರಜೆಯ ಮೇಲೆ ಊರಿಗೆ ಬಂದಿದ್ದ ಸಂದರ್ಭದಲ್ಲೇ ಮಂಗಳೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕಡಬ ತಾಲೂಕಿನ ಕೊಯಿಲ ಗ್ರಾಮದ ಪುತ್ಯೆ ನಿವಾಸಿ, ಸಿಐಎಸ್ಎಫ್ (CISF) ಜವಾನ್ ಸೀತಾರಾಮ ಗೌಡ (ಪ್ರಸ್ತುತ ಜಮ್ಮು ಸೆಂಟ್ರಲ್ ಜೈಲ್ ಕರ್ತವ್ಯ ನಿರತ) ಮೃತಪಟ್ಟ ದುರ್ದೈವಿ. ಜುಲೈ 3ರಂದು ರಜೆಯ ನಿಮಿತ್ತ ಊರಿಗೆ ಬಂದಿದ್ದ ಅವರು, ಜುಲೈ 8ರ ಬುಧವಾರ ಸಂಜೆ ಬೈಕ್‌ನಲ್ಲಿ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಬಳಿಯ ‘ರೇಡಿಯಂಟ್ ಸ್ಟಾರ್ ಹೋಟೆಲ್’ ಸಮೀಪ ಚಲಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಯಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಸ್ವಯಂ ಸ್ಕಿಡ್ಡೋ ಅಥವಾ ಹಿಟ್ ಅಂಡ್ ರನ್?: ಬೈಕ್ ನಿಯಂತ್ರಣ ತಪ್ಪಿ ಸ್ವಯಂ ಸ್ಕಿಡ್ ಆಗಿದೆಯೇ ಅಥವಾ ಯಾವುದಾದರೂ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆಯೇ (ಹಿಟ್ ಅಂಡ್ ರನ್) ಎಂಬ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮೃತರ ಪತ್ನಿ ರೋಹಿಣಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿನಂತಿಸಿದ್ದಾರೆ. ಈ ಕುರಿತು ಮಂಗಳೂರು ನಗರದ ಟ್ರಾಫಿಕ್ ಈಸ್ಟ್ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ. ರಜೆಯಲ್ಲಿ ಬಂದು ದುರಂತ ಅಂತ್ಯ ಕಂಡ ಯೋಧನ ನಿಧನಕ್ಕೆ ಕಡಬ ಮತ್ತು ಕೊಯಿಲ ಗ್ರಾಮಸ್ಥರು ತೀವ್ರ ಕಂಬನಿ ಮಿಡಿದಿದ್ದಾರೆ.


