ಬೆಳ್ತಂಗಡಿ: ರೋಗಬಾಧೆಗಳಿಂದ ಕಂಗಾಲಾಗಿರುವ ಅಡಿಕೆ ಬೆಳೆಗಾರರು ಮತ್ತು ವರ್ತಕರಿಗೆ ಈಗ ಮಹಾರಾಷ್ಟ್ರ ಅಧಿಕಾರಿಗಳ ಜಪ್ತಿ ಪ್ರಕ್ರಿಯೆ ಹೊಸ ಸಂಕಷ್ಟ ತಂದೊಡ್ಡಿದೆ.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಾಗಣೆಯಾಗುತ್ತಿದ್ದ ಅಡಿಕೆಯಲ್ಲಿ ರೆಡ್ ಆಕ್ಸೈಡ್ ಮಿಶ್ರಣ, ತೇವಾಂಶದ ಕೊರತೆ ಮತ್ತು ವಿದೇಶಿ ಅಡಿಕೆ ಬೆರೆಸಿರುವ ಶಂಕೆಯ ಮೇಲೆ ಅಲ್ಲಿನ ಆಹಾರ ಮತ್ತು ಔಷಧ ಆಡಳಿತ (FDA) ಅಧಿಕಾರಿಗಳು ಲಾರಿಗಳನ್ನು ಜಪ್ತಿ ಮಾಡುತ್ತಿದ್ದಾರೆ. ಪ್ರತಿ ಲಾರಿಯಲ್ಲಿ ₹1.10 ಕೋಟಿಯಿಂದ ₹1.70 ಕೋಟಿ ಮೌಲ್ಯದ ಅಡಿಕೆ ಇರುತ್ತಿದ್ದು, ತಪಾಸಣೆಯ ವಿಳಂಬ ಹಾಗೂ ಕಾನೂನು ಪ್ರಕ್ರಿಯೆಯಿಂದಾಗಿ ವರ್ತಕರ ಕೋಟ್ಯಂತರ ರೂಪಾಯಿ ಬಂಡವಾಳಕ್ಕೆ ಸವಾಲಾಗಿದೆ.
ಇದರಿಂದಾಗಿ ವರ್ತಕರು ಅಡಿಕೆ ಸಾಗಾಟವನ್ನು ಗಣನೀಯವಾಗಿ ಕಡಿಮೆ ಮಾಡಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕುಸಿಯುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ. ಮಹಾರಾಷ್ಟ್ರ ಅಧಿಕಾರಿಗಳ ಈ ಕಿರುಕುಳಕ್ಕೆ ಬೇಸತ್ತಿರುವ ಜಿಲ್ಲಾ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮೂಡಾಯೂರು, ಜೂನ್ 22ರ ಸಂಜೆಯೊಳಗೆ ಈ ಸಮಸ್ಯೆ ಬಗೆಹರಿಯದಿದ್ದರೆ ಜೂನ್ 23 ರಂದು ಪತ್ರಿಕಾಗೋಷ್ಠಿ ನಡೆಸಿ, ಜೂನ್ 24 ರಿಂದ ಎಲ್ಲಾ ಅಡಿಕೆ ವ್ಯವಹಾರ ಹಾಗೂ ಖರೀದಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


