ಬಂಟ್ವಾಳ; ಅಕ್ರಮವಾಗಿ ಗೋ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ಸಜಿಪಮೂಡ ನಿವಾಸಿ ಮುಸ್ತಾಪ (33) ಹಾಗೂ ಬಂಟ್ವಾಳ ಬಿ ಕಸಬಾ ನಿವಾಸಿ ಮಹಮ್ಮದ್ ಸಾದೀಕ್ (30) ಬಂಧಿತರು.
ದಿನಾಂಕ: 27.05.2026 ರಂದು ರಾತ್ರಿ, ಅಕ್ರಮ ಜಾನುವಾರು ವಧೆ ನಡೆಯುತ್ತಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿರವರಿಗೆ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯೊಂದಿಗೆ ಬಂಟ್ವಾಳ ಸಜಿಪಮೂಡ ಗ್ರಾಮದ ಪಂಜಾಜೆ ಎಂಬಲ್ಲಿಗೆ ತೆರಳಿ ಪರಿಶೀಲಿಸಿದಾಗ, ಮನೆಯೊಂದರ ಹಿಂಬದಿಯ ಕೊಟ್ಟಿಗೆಯಲ್ಲಿ ಮಾಂಸ ಕತ್ತರಿಸುತ್ತಿರುವುದು ಕಂಡುಬಂದಿರುತ್ತದೆ. ವಿಚಾರಣೆಯ ವೇಳೆ ಆರೋಪಿಗಳು ಪರವಾನಿಗೆ ಹೊಂದದೇ ಅಕ್ರಮವಾಗಿ ಕೃತ್ಯ ನಡೆಸುತ್ತಿರುವುದು ಧೃಢಪಟ್ಟಿದ್ದು, ಸ್ಥಳದಲ್ಲಿ ಒಂದು ಜಾನುವಾರನ್ನು ವಧೆ ಮಾಡಿ ಕತ್ತರಿಸಲಾದ ಮಾಂಸ, 06 ಜಾನುವಾರುಗಳು, ಒಂದು ಕಾರು ಹಾಗೂ ಕೃತ್ಯಕ್ಕೆ ಬಳಸಿದ ಸಾಮಾಗ್ರಿಗಳು ಪತ್ತೆಯಾಗಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಆರೊಪಿಗಳನ್ನು ಜಾನುವಾರುಗಳನ್ನು ಮತ್ತು ಇತರೆ ಸೊತ್ತುಗಳೊಂದಿಗೆ ವಶಕ್ಕೆ ಪಡೆದು, ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 68/2026, ಕಲಂ: 4,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


