ಬೆಂಗಳೂರು; ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ ಸುಧಾಕರ್ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಕಳೆದ ಒಂದು ತಿಂಗಳಿನಿಂದ ಅನಾರೋಗ್ಯಕ್ಕೀಡಾಗಿದ್ದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ಮೊದಲು ಮೊಣಕಾಲು ಸಂಬಂಧ ಆಪರೇಷನ್ಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಚಿವ ಡಿ ಸುಧಾಕರ್ ಅವರು ದಾಖಲಾಗಿದ್ದರು. ಈ ಶಸ್ತ್ರಚಿಕಿತ್ಸೆಯ ಬಳಿಕ ಅವರಿಗೆ ಶ್ವಾಸಕೋಶ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಮಣಿಪಾಲ್ ಆಸ್ಪತ್ರೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಐಸಿಯುನಲ್ಲಿಯೇ ಇದ್ದ ಸುಧಾರಕರ್ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಸರಳ ವ್ಯಕ್ತಿತ್ವದ ಇವರು ಪತ್ನಿ ಹರ್ಷಿಣಿ, ಮಗ ಸುಹಾಸ್ ಹಾಗೂ ಪುತ್ರಿ ಸ್ಫೂರ್ತಿ ಅವರನ್ನು ಅಗಲಿದ್ದಾರೆ. ಸಚಿವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಅಗಲಿಕೆಯಿಂದ ಚಿತ್ರದುರ್ಗ ಜಿಲ್ಲೆಯಾದ್ಯಂತ ಶೋಕದ ಛಾಯೆ ಆವರಿಸಿದೆ.


