ಮಂಗಳೂರು : ರಾತ್ರಿ ಪಾಳಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ತಲೆಗೆ ಸಿಮೆಂಟ್ ಶೀಟ್ ನಿಂದ ಹೊಡೆದು ಕೇರಳಕ್ಕೆ ಪರಾರಿಯಾಗಿದ್ದ ಇಬ್ಬರು ಕಿರಾತಕರನ್ನು ಸಿಸಿಬಿ ಪೊಲೀಸರು ಕೇರಳದ ಕಾಂಞಿಗಾಡ್‌ನಲ್ಲಿ ಬಂಧಿಸಿದ್ದಾರೆ.
ಬೆಳ್ತಂಗಡಿಯ ಕೊಕ್ಕಡ ನಿವಾಸಿ ಸಚಿನ್ ಕೆ.ಆರ್ (24) ಮತ್ತು ನೆಲ್ಯಾಡಿ ನಿವಾಸಿ ಚಂದನ್ (24) ಬಂಧಿತರು.
ಮಂಗಳೂರಿನ ಅಶೋಕನಗರದಲ್ಲಿ ಬಾಡಿಗೆಗಿದ್ದ ಇವರು ಕ್ರಮವಾಗಿ ಸ್ವೀಟ್ಸ್ ಫ್ಯಾಕ್ಟರಿ ವಾಹನ ಚಾಲಕ ಹಾಗೂ ಶೋರೂಮ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಮೇ 24ರಂದ ಬೆಳಗಿನ ಜಾವ 2:10ರ ಸುಮಾರಿಗೆ ಉರ್ವ ಠಾಣಾ ವ್ಯಾಪ್ತಿಯ ಕೋಡಿಕಲ್ ಬಳಿ ಇಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸುತ್ತಾಡುತ್ತಿದ್ದ ಇವರನ್ನು ತಡೆದ ಬೀಟ್ ಪೊಲೀಸರು ವಿಚಾರಿಸಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡ ಆರೋಪಿಗಳು, ಏಕಾಏಕಿ ಸಿಮೆಂಟ್ ಶೀಟ್ ತುಂಡಿನಿಂದ ಪೊಲೀಸ್ ಸಿಬ್ಬಂದಿಯ ತಲೆಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿ ಪರಾರಿಯಾಗಿದ್ದರು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು, ತಾಂತ್ರಿಕ ಹಾಗೂ ಖಚಿತ ಮಾಹಿತಿ ಆಧರಿಸಿ ಕೇರಳದಲ್ಲಿದ್ದ ಆರೋಪಿಗಳನ್ನು ಮೇ 26ರಂದು ಸೆರೆಹಿಡಿದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿಗಳನ್ನು ಉರ್ವ ಪೊಲೀಸರಿಗೆ ಒಪ್ಪಿಸಲಾಗಿದೆ.


