ಬೆಳ್ತಂಗಡಿ: ಕಾಡಾನೆ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ವಿದ್ಯಾರ್ಥಿನಿ ಹಾಗೂ ಬೈಕ್ ಸವಾರ ಪಾರಾದ ಘಟನೆ ಕೊಕ್ಕಡದ ಪಟ್ಟೂರಿನಿಂದ ಸೌತಡ್ಕಕ್ಕೆ ಬರುವ ಮಾರ್ಗ ಮಧ್ಯದ ವಸರಿಕಟ್ಟೆ ಎಂಬಲ್ಲಿ ನಡೆದಿದೆ.
ಸೋಮವಾರ (ಮಾ. 23) ಸಂಜೆ ಕಾಲೇಜು ಮುಗಿಸಿ ಬಸ್‌ನಲ್ಲಿ ಬಂದಿಳಿದ ವಿದ್ಯಾರ್ಥಿನಿಯೊಬ್ಬಳು ನಡೆದುಕೊಂಡು ಮನೆಗೆ ತೆರಳುತ್ತಿದ್ದಳು. ಈ ವೇಳೆ ಪೊದೆಯಲ್ಲಿದ್ದ ಕಾಡಾನೆ ದಿಢೀರನೆ ರಸ್ತೆಗೆ ಬಂದಿದ್ದು, ವಿದ್ಯಾರ್ಥಿನಿಯನ್ನು ಬೆನ್ನಟ್ಟಿದೆ. ಇದೇ ವೇಳೆ ಆ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸವಾರರ ಮೇಲೆಯೂ ಆನೆ ದಾಳಿ ಮಾಡಲು ಮುಂದಾಗಿದೆ. ಆನೆಯನ್ನು ಕಂಡು ಗಾಬರಿಗೊಂಡ ವಿದ್ಯಾರ್ಥಿನಿ ಹಾಗೂ ಸವಾರರು ಅಲ್ಲಿಂದ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಸದ್ಯ ಆನೆಯು ಅದೇ ಪರಿಸರದಲ್ಲಿ ಬೀಡುಬಿಟ್ಟಿರುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮಸ್ಥರು ಅನಗತ್ಯವಾಗಿ ಅರಣ್ಯದ ಅಂಚಿನ ರಸ್ತೆಗಳಲ್ಲಿ ಸಂಚರಿಸದಂತೆ ಇಲಾಖೆ ಸೂಚನೆ ನೀಡಿದೆ. ಸ್ಥಳೀಯರ ಮಾಹಿತಿಯ ಪ್ರಕಾರ, ಕಳೆದ ಎರಡು-ಮೂರು ದಿನಗಳಿಂದ ಈ ಆನೆಯು ಇದೇ ಪರಿಸರದಲ್ಲಿ ಸುತ್ತಾಡುತ್ತಿದ್ದು, ರೈತರ ತೋಟಗಳಿಗೆ ಹಾನಿ ಮಾಡುತ್ತಿದೆ. ಈಗ ಜನವಸತಿ ಪ್ರದೇಶದ ರಸ್ತೆಗೇ ಬಂದು ಜನರನ್ನು ಬೆನ್ನಟ್ಟಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಾಡಾನೆಯನ್ನು ಕೂಡಲೇ ಈ ಭಾಗದಿಂದ ಕಾಡಿಗಟ್ಟಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.


