ಗುವಾಹಟಿ: ಭಾರತೀಯ ವಾಯುಪಡೆಯ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನೇ ಶತ್ರು ರಾಷ್ಟ್ರಕ್ಕೆ ಮಾರಾಟ ಮಾಡುತ್ತಿದ್ದ ಆತಂಕಕಾರಿ ಜಾಲವೊಂದನ್ನು ಭದ್ರತಾ ಸಂಸ್ಥೆಗಳು ಭೇದಿಸಿವೆ. ಅಸ್ಸಾಂನ ಚಬುವಾ ವಾಯುಪಡೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗರಿಕ ಸಿಬ್ಬಂದಿಯೊಬ್ಬನನ್ನು ಬೇಹುಗಾರಿಕೆ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಹಣದ ಆಮಿಷಕ್ಕೆ ಒಳಗಾಗಿ ಪಾಕಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಯುದ್ಧ ವಿಮಾನಗಳ ಲೊಕೇಶನ್, ವಾಯುನೆಲೆಯ ರಕ್ಷಣಾ ಸಿದ್ಧತೆಗಳು ಮತ್ತು ಅಲ್ಲಿನ ಸಿಬ್ಬಂದಿಗೆ ಸಂಬಂಧಿಸಿದ ಅತ್ಯಂತ ರಹಸ್ಯ ದಾಖಲೆಗಳನ್ನು ಈತ ಹಂಚಿಕೊಂಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಂಧಿತನ ವಿರುದ್ಧ 1923ರ ಅಧಿಕೃತ ರಹಸ್ಯ ಕಾಯ್ದೆಯ (Official Secrets Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಈ ಪ್ರಕರಣವು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿರದೆ, ಇದರ ಹಿಂದೆ ಅಂತರಾಷ್ಟ್ರೀಯ ಬೇಹುಗಾರಿಕಾ ಜಾಲ ಕೆಲಸ ಮಾಡುತ್ತಿರುವ ಸಂಶಯವನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರಲು ಯತ್ನಿಸಿದ ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ.


