ಮಂಗಳೂರು; ಮನೆಗೆ ನುಗ್ಗಿ ದೈವದ ಪೂಜಾ ಸಾಮಾಗ್ರಿಗಳನ್ನು ಕಳವುಗೈದ ಆರೋಪಿಗಳನ್ನು ಬಂಧನ ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಬಜ್ಪೆ ನಿವಾಸಿ ವಾಜೀದ್ ಜೆ @ ವಾಜಿ(27), ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಸಯ್ಯದ್ ಆಲಿ(40) ಬಂಧಿತರು.
ಪ್ರಕರಣದ ವಿವರ;
ಕುಳಾಯಿ ಗ್ರಾಮ ಯಶೋದ ಕ್ಲಿನಿಕ್ ಹತ್ತಿರ ವಾಸವಾಗಿರುವ ಶ್ರೀಮತಿ ಅಮಿತಾ, ಅವರ ತಾಯಿ ಮನೆಯಲ್ಲಿ ದೈವಗಳ ಮೂರ್ತಿಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಪೂಜಾ ಪರಿಕರಗಳು ಇದ್ದು ಆ ಮನೆಯಲ್ಲಿ ಯಾರೂ ವಾಸವಿರದೇ ಕೇವಲ ಪೂಜೆ ಮಾಡಿ ದೀಪ ಹಚ್ಚಿ ನಂತರ ಬೀಗ ಹಾಕುತ್ತಿದ್ದರು. ದಿನಾಂಕ: 26-12-2025 ರಂದು ರಾತ್ರಿ ಸಮಯ ಯಾರೋ ಅಪರಿಚಿತರು ಮನೆಯ ಮೇಲ್ಚಾವಣಿಯ ಹಂಚು ತೆಗೆದು ಮನೆಯೊಳಗೆ ಪ್ರವೇಶಿಸಿ ಸುಮಾರು ರೂ 1,00,000/- ಮೌಲ್ಯದ ಪಸಪ್ಪ ದೈವದ ತಾಮ್ರದ ಮೂರ್ತಿ-1, ಮಂತ್ರದೇವತೆಯ ಬೆಳ್ಳಿಯ ಮೂರ್ತಿ-1, ಕಲ್ಲುರ್ಟಿ ಪಂಜುರ್ಲಿ ದೈವದ ತಾಮ್ರದ ಮೂರ್ತಿ-1, ಬೆಳ್ಳಿಯ ಕಡ್ಸಲೆ (ಖಡ್ಗ)-1, ತಾಮ್ರದ ಘಂಟೆ–2, ತಾಮ್ರದ ಚೆಂಬು–4, ಹಾಗೂ ಎಲ್.ಇ.ಡಿ ಟಿ.ವಿ-1 ಕಳವು ಮಾಡಿದ ಬಗ್ಗೆ ಠಾಣಾ ಅ.ಕ್ರ 170/2025 ಕಲಂ: 331 (4), 305 (ಎ) ಬಿ.ಎನ್.ಎಸ್ ರಂತೆ ದಿನಾಂಕ: 27.12.2025 ರಂದು ಪ್ರಕರಣವನ್ನು ದಾಖಲಿಸಿಕೊಂಡು ಸುರತ್ಕಲ್ ಪೊಲೀಸರು ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು, ತಾಂತ್ರಿಕ ವಿಧಾನಗಳನ್ನು ಪರಿಶೀಲನೆ ನಡೆಸಿದಂತೆ ಆರೋಪಿಯಾದ ವಾಜೀದ್ ಜೆ @ ವಾಜಿ ಎಂಬಾತನನ್ನು ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಸಯ್ಯದ್ ಆಲಿಯನ್ನು ಮಂಗಳೂರಿನ ಜೋಕಟ್ಟೆಯಲ್ಲಿ ಬಂಧಿಸಿದ್ದಾರೆ.
ಬಂಧಿತರಿಂದ ಮನೆಯಿಂದ ಕಳ್ಳತನವಾದ ಸುಮಾರು 1,95,000/- ರೂ ಮೌಲ್ಯದ ಬೆಳ್ಳಿಯ ಮಂತ್ರದೇವತೆಯ ಮೂರ್ತಿ, ಕೊಡೆ, ಕಡ್ಸಲೆ, ಸುಮಾರು ರೂ 2,750/- ಮೌಲ್ಯದ ಹಿತ್ತಾಳೆ ಪೂಜಾ ಸಾಮಾಗ್ರಿ, ಸುಮಾರು 300/- ಮೌಲ್ಯದ ತಾಮ್ರದ ಪೂಜಾ ಸಾಮಾಗ್ರಿ, ಸುಮಾರು 2,000/- ಮೌಲ್ಯದ ಟಿ.ವಿ & ಸೆಟ್ ಆಪ್ ಬಾಕ್ಸ್, ಆರೋಪಿತರ 2 ಮೊಬೈಲ್ ಹಾಗೂ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಸುಮಾರು 30,000/- ಮೌಲ್ಯದ ಸ್ಕೂಟರ್-1 ಅನ್ನು ಮಹಜರು ಮುಖೇನ ಸ್ವಾಧೀನ ಪಡೆಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಮನೆ ಕಳ್ಳತನ ಮಾಡಿದ ಆರೋಪಿ ವಾಜೀದ್ ಜೆ @ ವಾಜಿ ಈತನ ಮೇಲೆ ಸುರತ್ಕಲ್ ಠಾಣೆಯಲ್ಲಿ ‘ಬಿ’ ರೌಡಿ ಹಾಳೆ ಹಾಗೂ ಎಂಓಬಿ ತೆರೆಯಲಾಗಿದ್ದು ಈತನ ಮೇಲೆ ಮಂಗಳೂರು ನಗರ, ಉಡುಪಿ, ಉತ್ತರ ಕನ್ನಡ, ಹಾಸನ ಜಿಲ್ಲೆಗಳಾದ್ಯಂತ 1 ಕೊಲೆಯತ್ನ, 2 ದರೋಡೆ, 3 ದನ ಕಳ್ಳತನ, 6 ಮನೆಕಳ್ಳತನ, 3 ವಾಹನ ಕಳ್ಳತನ, 1 ಇತರ ಪ್ರಕರಣಗಳು ದಾಖಲಾಗಿದ್ದು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿರುವುದಾಗಿದೆ. ಆರೋಪಿಗಳನ್ನು ದಿನಾಂಕ: 28.01.2026 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.


