ಬಂಟ್ವಾಳ; ಮಾಣಿ ಗ್ರಾಮ ಪಂಚಾಯತ್ತಿನಲ್ಲಿ ಕಳೆದ ಐದು ವರ್ಷಗಳಿಂದ ತ್ಯಾಜ್ಯ ವಿಲೇವಾರಿಯ ಕಾರ್ಯ ಸುಸೂತ್ರವಾಗಿ ನಡೆಯುತ್ತಿದ್ದು, ಈ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿದ ಸಮಾಧಾನ ನಮಗಿದೆ ಎಂದು ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ, ಕೊಡಾಜೆ ಹೇಳಿದರು.
ತ್ಯಾಜ್ಯ ವಿಲೇವಾರಿಯ ನೂತನ ವಾಹನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತ್ಯಾಜ್ಯ ವಿಲೇವಾರಿ ಎನ್ನುವುದು ಸ್ಥಳೀಯಾಡಳಿತಕ್ಕೆ ಸವಾಲಿನ ಸಂಗತಿ. ತ್ಯಾಜ್ಯ ಶುಲ್ಕದ ಸಂಗ್ರಹಕ್ಕಿಂತ ಮೀರಿ ತ್ಯಾಜ್ಯ ವೆಚ್ಚ ಆಗುತ್ತದೆ. ಆದರೆ ಸಾರ್ವಜನಿಕವಾಗಿ ಯಾವುದೇ ತೊಂದರೆಗಳು ಆಗಬಾರದು ಮತ್ತು ದೂರುಗಳು ಕೂಡಾ ಬರಬಾರದು ಎನ್ನುವ ನಿಟ್ಟಿನಲ್ಲಿ ಪಂಚಾತ್ ಆಡಳಿತ ಮಂಡಳಿಯು, ಅಧಿಕಾರಿ ವರ್ಗ ಮತ್ತು ತ್ಯಾಜ್ಯ ಸಿಬ್ಬಂದಿಯವರ ಸಹಕಾರದೊಂದಿಗೆ ಈ ಕಷ್ಟದ ಕಾರ್ಯವನ್ನು ಮಾಡುತ್ತಿದೆ. ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳು ಮತ್ತು ಮುಂದಿನ ದಿನಗಳಲ್ಲಿಯೂ ಎಲ್ಲರ ಸಹಕಾರ ಹೀಗೇ ಮುಂದುವರಿಯಲಿ ಎಂದು ಅವರು ಹೇಳಿದರು.
ಮಾಣಿ ಗ್ರಾಮ ಪಂಚಾಯತ್ತಿನ ನಿಕಟಪೂರ್ವಾಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿಯವರು ನೂತನ ವಾಹನಕ್ಕೆ ಚಾಲನೆಯನ್ನು ನೀಡಿದರು.ಮಾಣಿ ಗ್ರಾಮ ಪಂಚಾಯತ್ತಿನ ಮಾಜಿ ಅಧ್ಯಕ್ಷ ಇಬ್ರಾಹಿಂ.ಕೆ.ಮಾಣಿ, ಮಾಜಿ ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್, ರಮಣಿ.ಡಿ.ಪೂಜಾರಿ, ಪ್ರೀತಿ ಡಿನ್ನಾ ಪಿರೇರಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ತಾಲೂಕು ಕೃಷಿ ಸಂಯೋಜಕಿ ಸಾಂಗವಿ, ಮಾಣಿಕ್ಯ ಸಂಜೀವಿನಿ ಒಕ್ಕೂಟದ ಎಲ್.ಸಿ.ಆರ್.ಪಿ ಲೈಲಾಬಿ, ಎಂ.ಬಿ.ಕೆ ಸ್ವಾತಿ, ಪಶು ಸಖಿ ಚೈತ್ರ, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ, ತ್ಯಾಜ್ಯ ವಿಲೇವಾರಿಯ ಸಿಬ್ಬಂದಿಯವರು ಮತ್ತಿತರರು ಉಪಸ್ಥಿತರಿದ್ದರು.



