ನ. 15 ರಿಂದ 19ರ ವರೆಗೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಲಕ್ಷದೀಪೋತ್ಸವ ನಡೆಯಲಿದೆ.
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ನಡೆಯಲಿದ್ದು,ಉತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.
ಪ್ರತೀದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನ. 15ರಂದು ಬೆಳಗ್ಗೆ 9.30ಕ್ಕೆ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ.
ಮೊದಲ ದಿನ ಹೊಸಕಟ್ಟೆ ಉತ್ಸವ, ನ. 16ರಂದು ಕೆರೆ ಕಟ್ಟೆ ಉತ್ಸವ, 17ರಂದು ಲಲಿತೋದ್ಯಾನ ಉತ್ಸವ ನಡೆಯಲಿದ್ದು, ನ. 18ರಂದು ಸಂಜೆ 5ಕ್ಕೆ ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನ ನಡೆಯಲಿದ್ದು, ರಾಜ್ಯ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯಾಭಿವೃದ್ಧಿ ಇಲಾಖೆ ಸಚಿವ ಡಾ| ಎಂ.ಬಿ. ಪಾಟೀಲ್ ಸರ್ವಧರ್ಮ ಸಮ್ಮೇಳನದ ಅಧೀವೇಶನ ಉದ್ಘಾಟಿಸಲಿದ್ದು, ಹರಿಹರಪುರದ ಸ್ವಯಂಪ್ರಕಾಶ್ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಎ. ಸೂರ್ಯಪ್ರಕಾಶ್ ಪಂಡಿತ್
ಮತ್ತು ಖ್ಯಾತ ಅಂಕಣಕಾರ ತನ್ವೀರ್ ಅಹಮ್ಮದ್ ಉಲ್ಲಾ ಉಪನ್ಯಾಸ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ ಗಂಟೆ 8.30ರಿಂದ ಚೆನ್ನೈ ಶ್ರೀದೇವಿ ನೃತ್ಯಾಲಯದ ಕಲಾವಿದರಿಂದ ವಿದುಷಿ ಡಾ| ಶೀಲಾ ಉನ್ನಿಕೃಷ್ಣನ್ ನಿರ್ದೇಶನದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಲಿದೆ. ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಲಿದೆ. ನ. 19ರಂದು ಸಂಜೆ 5ಕ್ಕೆ ಸಾಹಿತ್ಯ ಸಮ್ಮೇಳನದ 93ನೇ ಅಧೀವೇಶನವನ್ನು ಹಿರಿಯ ಸಾಹಿತಿ ಮತ್ತು ಅಂಕಣಕಾರ ಪ್ರೊ| ಪ್ರೇಮಶೇಖರ ಉದ್ಘಾಟಿಸಲಿದ್ದು, ಪತ್ರಕರ್ತ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕಿ ಶಾಂತಾ ನಾಗಮಂಗಲ, ಡಾ| ರಘು ವಿ. ಮತ್ತು ಧಾರವಾಡದ ಸಾಹಿತಿ ಡಾ| ಬಿ.ಎಂ. ಶರಭೇಂದ್ರ ಸ್ವಾಮಿ ಉಪನ್ಯಾಸ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ 8.30ರಿಂದ ಬೆಂಗಳೂರಿನ ರಾಹುಲ್ ವೆಲ್ಲಾಲ್ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮವಿದೆ. ರಾತ್ರಿ 9.45 ರಿಂದ ದಕ್ಷಯಜ್ಞ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ರಾತ್ರಿ 12ರ ಬಳಿಕ ಗೌರಿಮಾರುಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ನಡೆಯಲಿದೆ. ನ. 20ರಂದು ಜಾವ ಲಕ್ಷದೀಪೋತ್ಸವ ಸಮಾಪನಗೊಳ್ಳಲಿದ್ದು, ಸಂಜೆ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.


