ಮಂಗಳೂರು; ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಜಾತಿ ನಿಂದನೆ ಮಾಡಿ ಸಂದೇಶ ರವಾನಿಸಿದ ಆರೋಪಿಯನ್ನ ಮಂಗಳೂರು ಪೂರ್ವ ಪೊಲೀಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಂಗಳೂರಿನ ಆಕಾಶಭವನದ ನಿಖಿಲ್ ರಾಜ್, (27) ಬಂಧಿತ ಆರೋಪಿ.
ಪ್ರಕರಣದ ವಿವರ;
ಕೆಲವು ದಿನಗಳ ಹಿಂದೆ ಕಾರ್ಕಳದ ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದ. ಇದಕ್ಕೂ ಮುನ್ನ ಅಭಿಷೇಕ್ ದೂರುದಾರ ಯುವತಿಯನ್ನು ಬೆದರಿಸಿ ಮಾಡಿರುವ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವುದಲ್ಲದೆ, ಅಭಿಷೇಕ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನೇಣು ಹಾಕಿರುವ ಫೋಟೋ ಗಳನ್ನು ದೂರುದಾರರಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ. ಅಭಿಷೇಕ್ ಆಚಾರ್ಯನ ತಮ್ಮ ಅಭಿಜಿತ್ ಆಚಾರ್ಯ ಹಾಗೂ ಇತರರು ಅಭಿಷೇಕ್ ಆಚಾರ್ಯನು ಬರೆದಿದ್ದ ಡೆತ್ ನೋಟ್ ಹಾಗೂ ದೂರುದಾರರ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ದೃಶ್ಯ ಮಾದ್ಯಮ, ಯೂಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್ ಗ್ರೂಪ್ ಗಳಲ್ಲಿ ವೈರಲ್ ಮಾಡಿ ದೂರುದಾರ ಯುವತಿ ತೇಜೋವಧೆ ಮಾಡಿ ಮಾನಸಿಕ ಹಿಂಸೆ ನೀಡಿರುತ್ತಾರೆ. ದೂರುದಾರ ಯುವತಿ ಪರಿಶಿಷ್ಟ ಜಾತಿಗೆ ಸೇರಿದ್ದು, ಅಶ್ಲೀಲ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಜಾತಿ ನಿಂದನೆಯ ಚ್ಯುತಿ ಬರುವಂತೆ ಮಾಡಿರುವುದಾಗಿ ದೂರುದಾರ ಯುವತಿ ದಿನಾಂಕ 18-10-2025 ರಂದು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯಲ್ಲಿ ಅಭಿಷೇಕ್ ಆಚಾರ್ಯ ಎಂಬಾತನ ಸಾವಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ರವಾನಿಸಿದ್ದ ಸಂದೇಶಕ್ಕೆ ಪೂರಕವಾಗಿ ಜಾತಿ ನಿಂದನೆಯ ಶಬ್ದವನ್ನು ಬಳಸಿದ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ, ನಿಖಿಲ್ ರಾಜ್ ನನ್ನು 21-10-2025 ರಂದು ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ರವರಾದ ಪ್ರತಾಪ್ ಸಿಂಗ್ ಥೋರಟ್ ರವರು ಬಂಧಿಸಿ ವಿಚಾರಣೆಗೊಳಪಡಿಸಿ, ಆತನು ಉಪಯೋಗಿಸುತ್ತಿದ್ದ ಮೊಬೈಲ್ ಫೋನ್ನ್ನು ಮುಂದಿನ ತನಿಖೆಗೆ ಒಳಪಡಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಕರಣವು ಎಸ್.ಸಿ/ಎಸ್.ಟಿ ಕಾಯ್ದೆಯಡಿಯಲ್ಲಿ ದಾಖಲಾಗಿ ತನಿಖೆ ನಡೆಯುತ್ತಿದ್ದು, ತನಿಖೆ ಮುಂದುವರೆದು ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ದ ಗಂಭೀರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


