Friday, August 28, 2026
Homeಕರಾವಳಿಮಂಗಳೂರುಮಂಗಳೂರು; ದೌರ್ಜನ್ಯ ಎಸಗಿದ ಆರೋಪಿಯ ಬಂಧನಕ್ಕೆ ವಿಳಂಬ: ಸಂಕಷ್ಟದಲ್ಲಿ ದೂರುದಾರೆ ನರ್ಸ್; ಪೊಲೀಸ್ ಕಮಿಷನರ್ ಸ್ಪಷ್ಟನೆ

ಮಂಗಳೂರು; ದೌರ್ಜನ್ಯ ಎಸಗಿದ ಆರೋಪಿಯ ಬಂಧನಕ್ಕೆ ವಿಳಂಬ: ಸಂಕಷ್ಟದಲ್ಲಿ ದೂರುದಾರೆ ನರ್ಸ್; ಪೊಲೀಸ್ ಕಮಿಷನರ್ ಸ್ಪಷ್ಟನೆ

- Advertisement -
- Advertisement -

ಮಂಗಳೂರು: ತನ್ನ ಮೇಲೆ ದೌರ್ಜನ್ಯ ಎಸಗಿದ ಆರೋಪಿ ವಿರುದ್ಧ ದೂರು ನೀಡಿದ ಪುತ್ತೂರು ಮೂಲದ ನರ್ಸ್ ನಂದಿನಿ ಎಂಬುವರಿಗೆ ಆರೋಪಿ ಕೊಲೆ ಬೆದರಿಕೆ ಹಾಕಿದ್ದು, ದೂರು ನೀಡಿ ದಿನಗಳೇ ಕಳೆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ನೀರುಮಾರ್ಗದಲ್ಲಿ ಬಾಡಿಗೆ ಮನೆಯಲ್ಲಿದ್ದ ನಂದಿನಿ ಮೈಸೂರಿಗೆ ತೆರಳಿದ್ದ ವೇಳೆ, ಅವರ ಮನೆಗೆ ಸ್ನೇಹಿತೆಯರಾದ ಚಂದನಾ ಮತ್ತು ಆದಿತ್ಯಾ ಬಂದಿದ್ದರು. ಈ ವೇಳೆ ಮನೆಗೆ ನೌಶದ್ ಅಕ್ರಮ ಪ್ರವೇಶ ಮಾಡಿ ಅವರನ್ನು ನಿಂದಿಸಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ನಂದಿನಿಗೂ ಅಶ್ಲೀಲವಾಗಿ ಬೈದು, ವಾಟ್ಸಾಪ್ ವಾಯ್ಸ್ ನೋಟ್ ಮೂಲಕ “ಪೋಲೀಸರಿಗೆ ಶರಣಾಗುವ ಮುನ್ನ ನಿನ್ನ ತಲೆ ತೆಗೀತೀನಿ” ಎಂದು ಕೊಲೆ ಬೆದರಿಕೆ ಹಾಕಿದ್ದ.

ಈ ಸಂಬಂಧ ಮಹಿಳಾ ಠಾಣೆ ಹಾಗೂ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದರೂ ಆರೋಪಿಯ ಬಂಧನವಾಗಿಲ್ಲ. ಇದರಿಂದ ಭೀತಿಗೊಳಗಾದ ನಂದಿನಿ ವಿಎಚ್‌ಪಿ ಮತ್ತು ದುರ್ಗಾವಾಹಿನಿ ಮುಖಂಡರ ರಕ್ಷಣೆ ಕೋರಿದ್ದಾರೆ. ಇದೇ ವೇಳೆ ಪ್ರಕರಣ ಠಾಣೆ ಮೆಟ್ಟಿಲೇರುತ್ತಿದ್ದಂತೆ ನಂದಿನಿ ಹಾಗೂ ಮತ್ತೊಬ್ಬ ನರ್ಸ್ ಆದಿತ್ಯಾ ಅವರನ್ನು ಆಸ್ಪತ್ರೆ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ.

ಆರೋಪಿಯ ಬಂಧನ ವಿಳಂಬದ ವಿರುದ್ಧ ಸಾರ್ವಜನಿಕರು ಹಾಗೂ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಪ್ರಕರಣದ ಕುರಿತು ಸ್ಪಷ್ಟನೆ ನೀಡಿದ್ದಾರೆ.“ನಮಗೂ ಆರೋಪಿಯನ್ನು ಬಂಧಿಸುವ ಉದ್ದೇಶವೇ ಇದೆ. ಈ ಪ್ರಕರಣದಲ್ಲಿ ಯಾವುದೇ ವಿನಾಯಿತಿ ನೀಡಲಾಗಿಲ್ಲ. ಆದರೆ ಇದು ದೂರವಾಣಿ ಮೂಲಕ ಬೆದರಿಕೆ ಹಾಕಿದ ಪ್ರಕರಣವಾಗಿದೆ. ಕಾನೂನಿನಲ್ಲಿ ಈ ಅಪರಾಧಕ್ಕೆ ನಿಗದಿಪಡಿಸಿರುವ ಶಿಕ್ಷೆಯ ಮಿತಿ ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆಯಿರುವುದರಿಂದ ತಕ್ಷಣ ಬಂಧಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಂದು ಕಮಿಷನರ್ ತಿಳಿಸಿದ್ದಾರೆ. 

- Advertisement -

Latest News

error: Content is protected !!