Thursday, August 27, 2026
Homeಕರಾವಳಿಮಂಗಳೂರು“ಪ್ರಾಣಿಗಳ ಮೇಲೆ ದಯೆ ಇರಲಿ”… ಮಕ್ಕಳ ಬದುಕಿನ ಮೇಲೂ ಕಾಳಜಿ ಇರಲಿ! ಗ್ರಾಮೀಣ ಪ್ರದೇಶದ ಮಕ್ಕಳ...

“ಪ್ರಾಣಿಗಳ ಮೇಲೆ ದಯೆ ಇರಲಿ”… ಮಕ್ಕಳ ಬದುಕಿನ ಮೇಲೂ ಕಾಳಜಿ ಇರಲಿ! ಗ್ರಾಮೀಣ ಪ್ರದೇಶದ ಮಕ್ಕಳ ಪಯಣ ಪ್ರಾಣಕ್ಕೆ ಸಂಚಕಾರ ಆಗದಿರಲಿ

- Advertisement -
- Advertisement -

ಮಳೆ ಸುರಿಯುತ್ತಿದೆ, ರಸ್ತೆ ಒದ್ದೆಯಾಗಿದೆ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಇಂತಹ ರಸ್ತೆಯಲ್ಲಿ ಪ್ರತಿದಿನ ಶಾಲೆಗೆ ಹೋಗುವ ಗ್ರಾಮೀಣ ಮಕ್ಕಳ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಒಮ್ಮೆಯಾದರೂ ಯೋಚಿಸಿದ್ದೇವೆಯೇ?

“ಪ್ರಾಣಿಗಳ ಮೇಲೆ ದಯೆ ಇರಲಿ” ಎಂದು ಬಸ್ಸಿನ ಹಿಂಭಾಗದಲ್ಲಿ ಬರೆದ ಸಾರಿಗೆ ಸಂಸ್ಥೆ ಅದೇ ಬಸ್ ನ ಹಿಂಭಾಗದಲ್ಲಿ ನೇತಾಡಿಕೊಂಡು ಹೋಗುವ ವಿದ್ಯಾರ್ಥಿಗಳ ಜೀವದ ಬಗ್ಗೆ ಎಂದಾದರೂ ಆಲೋಚನೆ ಮಾಡಿದೆಯೋ “ಪ್ರಾಣಿಗಳ ಮೇಲೆ ದಯೆ ಇರಲಿ” ಎಂಬುದು ಬಹಳ ಒಳ್ಳೆಯ ಮಾತು. ಆದರೆ ಅದೇ ದಯೆ, ಅದೇ ಕಾಳಜಿ ನಮ್ಮ ಮಕ್ಕಳ ಸುರಕ್ಷತೆಯ ಮೇಲೂ ಇರಬೇಕಲ್ಲವೇ?

ಗ್ರಾಮೀಣ ಪ್ರದೇಶದ ಅನೇಕ ಮಕ್ಕಳು ಶಾಲೆಗೆ ತೆರಳಲು ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಬೆಳಗಿನ ಜಾವ ಪುಸ್ತಕದ ಚೀಲ ಹೊತ್ತು ಮನೆ ಬಿಟ್ಟು ಹೊರಡುವ ಆ ಪುಟ್ಟ ಹೆಜ್ಜೆಗಳು, ಸಂಜೆ ಸುರಕ್ಷಿತವಾಗಿ ಮನೆಗೆ ಮರಳುತ್ತವೆಯೇ ಎಂಬ ಆತಂಕ ಅವರ ಪೋಷಕರ ಮನದಲ್ಲಿರುತ್ತದೆ.

ಬಸ್ ಬಂದರೆ ಏರುವ ಆತುರ… ಬಸ್ ತುಂಬಿದ್ದರೆ ನಿಲ್ಲುವ ಅನಿವಾರ್ಯತೆ… ಕೆಲವೊಮ್ಮೆ ಬಾಗಿಲಿನ ಬಳಿ ನಿಂತೇ ಪ್ರಯಾಣಿಸುವ ಪರಿಸ್ಥಿತಿ ಆ ಬಸ್ ಬಿಟ್ಟು ಬೇರೆ ಬಸ್ ನಲ್ಲಿ ಹೋಗಬಹುದು ಎಂದರೆ ಮತ್ತೆ ಗಂಟೆಗಟ್ಟಲೆ ಕಾಯಬೇಕು ಇದರಿಂದ ಶಾಲಾ ಕಾಲೇಜುಗಳ ಸಮಯಕ್ಕೆ ವಿದ್ಯಾರ್ಥಿಗಳು ತಲುಪಲು ಅಸಾಧ್ಯ.ಒಂದು ವೇಳೆ ಏನಾದರೂ ಆಯತಪ್ಪಿದರೆ ಸಾಕು ಬದುಕಿನ ದಾರಿ ಅಲ್ಲೇ ಮುಗಿಯಬಹುದು!. ಇದು ಕೇವಲ ಸಾರಿಗೆ ಸಮಸ್ಯೆಯಲ್ಲ. ಇದು ಗ್ರಾಮೀಣ ಪ್ರದೇಶದ ಮಕ್ಕಳ ಸುರಕ್ಷತೆಯ ಪ್ರಶ್ನೆಯಾಗಿದೆ. ನಗರ ಪ್ರದೇಶಗಳಲ್ಲಿ ಮಕ್ಕಳಿಗಾಗಿ ಶಾಲಾ ವಾಹನ, ಆಟೋ, ಸುರಕ್ಷಿತ ಪಾದಚಾರಿ ಮಾರ್ಗ, ಟ್ರಾಫಿಕ್ ನಿಯಂತ್ರಣ ಸೇರಿದಂತೆ ಹಲವು ವ್ಯವಸ್ಥೆಗಳಿರಬಹುದು. ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂತಹ ಸೌಲಭ್ಯಗಳು ಎಷ್ಟರ ಮಟ್ಟಿಗೆ ದೊರೆಯುತ್ತಿವೆ?

ಪ್ರಯಾಣಿಸುವ ಪ್ರಯಾಣಿಕರಿಗೆ ಅನುಗುಣವಾಗಿ ಸಾರಿಗೆ ವ್ಯವಸ್ಥೆ ಆಗಬೇಕಾಗಿದ್ದು ಇಲ್ಲಿ ಇದ್ಯಾವುದೂ ಇಲ್ಲದೇ ಬಂದ ಬಸ್ ಗೆ ಹತ್ತಿ ಮುನ್ನಡೆಯಬೇಕಾದ ಪರಿಸ್ಥಿತಿ ಮಕ್ಕಳದ್ದು, ಬಸ್ ನ ಮುಂಭಾಗ ಹಿಂಭಾಗದಲ್ಲಿ ಬಾಗಿಲನ್ನು ಹಿಡಿದು ನೇತಾಡಿಕೊಂಡು ಹೋಗುವ ಪರಿಸ್ಥಿತಿ ನೋಡಿದರೆ ಖಂಡಿತವಾಗಿಯೂ ಜೀವವನ್ನು ಕೈಯಲ್ಲಿ ಹಿಡಿದು ಕೊಂಡು ಸಾಗಿದಂತೆ ಭಾಸವಾಗುತ್ತದೆ. ಒಂದುವೇಳೆ ಏನಾದರೂ ಆಯತಪ್ಪಿದರೆ ಸಾಕು ಬದುಕಿನ ದಾರಿ ಅಲ್ಲೇ ಮುಗಿಯಬಹುದು! ಏನೆನೋ ಕನಸುಗಳನ್ನು ಹೊತ್ತು ಪೋಷಕರು ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಿದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಪಣತೊಟ್ಟು ಹೊರಟ ಮಕ್ಕಳಿಗೆ ಏನಾದರೂ ಆಪತ್ತು ಸಂಭವಿಸಿದರೆ ಏನಾಗಬಹುದು ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕಿದೆ.

ಮಕ್ಕಳು ಶಾಲಾಕಾಲೇಜುಗಳಿಗೆ ಹೋಗುವುದು ಅವರ ತಪ್ಪಲ್ಲ. ಅವರು ಬಸ್‌ನಲ್ಲಿ ಪ್ರಯಾಣಿಸುವುದು ಅವರ ತಪ್ಪಲ್ಲ. ಹಾಗಿದ್ದರೆ ಅವರ ಸುರಕ್ಷತೆಯ ಹೊಣೆ ಯಾರದ್ದು ಎಂಬ ಪ್ರಶ್ನೆ ಕಾಡುತ್ತಿದೆ? ಈ ಜವಾಬ್ದಾರಿ ಪೋಷಕರದ್ದೇ? ಶಾಲೆಯದ್ದೇ? ಸಾರಿಗೆ ಇಲಾಖೆಯದ್ದೇ? ವಾಹನ ಚಾಲಕರದ್ದೇ? ಅಥವಾ ಇಡೀ ಸಮಾಜದದ್ದೇ? ಇದಕ್ಕೆ ಎಲ್ಲರದ್ದೂ ಉತ್ತರ ಒಂದೇ ಮಕ್ಕಳನ್ನು ಹೊತ್ತೊಯ್ಯುವ ಬಸ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಬಾರದು. ಬಸ್‌ನ ಬಾಗಿಲಲ್ಲಿ ಮಕ್ಕಳು ಅಪಾಯಕಾರಿ ರೀತಿಯಲ್ಲಿ ನಿಂತು ಪ್ರಯಾಣಿಸುವ ಪರಿಸ್ಥಿತಿ ಬರಬಾರದು. ಚಾಲಕರು ಮಳೆಗಾಲದಲ್ಲಿ ವೇಗ ನಿಯಂತ್ರಿಸಬೇಕು. ಭಾರೀ ವಾಹನಗಳ ಚಾಲಕರು ಶಾಲಾ ಮಕ್ಕಳು ಸಂಚರಿಸುವ ಗ್ರಾಮೀಣ ರಸ್ತೆಗಳಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸಬೇಕು.

ಸಂಚಾರ ಸಾರಿಗೆ ಅಧಿಕಾರಿಗಳು ಕೂಡ ಗ್ರಾಮೀಣ ಭಾಗದ ರಸ್ತೆ, ಬಸ್‌ ನಿಲ್ದಾಣ, ಶಾಲಾ ಮಾರ್ಗ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸಬೇಕು.

ಏಕೆಂದರೆ ಒಬ್ಬ ಮಗುವಿನ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾವು ಒಂದು ಪ್ರಾಣಿಯನ್ನು ಅಪಾಯದಲ್ಲಿ ಕಂಡರೆ ಓಡಿ ಹೋಗಿ ರಕ್ಷಿಸಲು ಮುಂದಾಗುತ್ತೇವೆ. ಅದು ಮಾನವೀಯತೆ. ಆದೆ ರೀತಿ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳನ್ನು ಈ ಸ್ಥಿತಿಯಲ್ಲಿ ಕಂಡಾಗಲೂ ಅದೇ ಮಾನವೀಯತೆ ನಮ್ಮೊಳಗೆ ಮೂಡಬೇಕು.

ಸ್ವಯಂಚಾಲಿತ ಬಾಗಿಲುಗಳು ಇರುವ ಬಸ್ ಗಳನ್ನೇ ಬಳಕೆ ಮಾಡಿ:

ಚಾಲಕ ನಿರ್ವಾಹಕ ಹಾಗೂ ಸಾರಿಗೆ ಸಂಸ್ಥೆಯಲ್ಲಿ ಕಳಕಳಿಯ ಮನವಿ ದಯವಿಟ್ಟು ಸ್ವಯಂ ಚಾಲಿತ ಬಾಗಿಲು ವ್ಯವಸ್ಥೆ ಇರುವ ಬಸ್ ಗಳನ್ನು ಮಾತ್ರ ಇಂತಹ ಸಂದರ್ಭದಲ್ಲಿ ಬಳಸಿ ಇಲ್ಲವಾದಲ್ಲಿ ತಮ್ಮದಲ್ಲದ ತಪ್ಪಿಗೆ ತಾವೂ ವಿನಾಕಾರಣ ಶಿಕ್ಷೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಬಹುದು ಆದ್ದರಿಂದ ಪೂರ್ವಯೋಜಿತ ಚಿಂತನೆ ಮಾಡಿಕೊಂಡು ಸುರಕ್ಷಿತ ಪ್ರಯಾಣಕ್ಕೆ ಹೆಚ್ಚಿನ ಆಧ್ಯತೆ ನೀಡುವ ಅವಶ್ಯಕತೆ ಇರುತ್ತದೆ.

ಗ್ರಾಮೀಣ ಪ್ರದೇಶದ ಮಕ್ಕಳ ಪಯಣ ಪ್ರಾಣಕ್ಕೆ ಸಂಚಕಾರ ಆಗದಿರಲಿ!

ಗ್ರಾಮೀಣ ಮಕ್ಕಳ ಶಾಲಾ ಪ್ರಯಾಣ ಪ್ರತಿದಿನದ ಸಾಹಸವಾಗಬಾರದು.ಅದು ಅವರ ಹಕ್ಕಾಗಿರುವ ಶಿಕ್ಷಣದ ಸುರಕ್ಷಿತ ಪಯಣವಾಗಬೇಕು.ಇಂದು ನಾವು ಪ್ರಶ್ನೆ ಕೇಳದಿದ್ದರೆ, ನಾಳೆ ಯಾವುದಾದರೂ ಅಪಘಾತದ ನಂತರ ಕಣ್ಣೀರು ಸುರಿಸಿ “ಹೀಗೆ ಆಗಬಾರದಿತ್ತು” ಎಂದು ಹೇಳುವುದರಲ್ಲಿ ಅರ್ಥವಿಲ್ಲ.ಅಪಘಾತವಾದ ಮೇಲೆ ಪರಿಹಾರ ನೀಡುವುದಕ್ಕಿಂತ, ಅಪಘಾತವೇ ಆಗದಂತೆ ನೋಡಿಕೊಳ್ಳುವುದು ಸರ್ಕಾರದ, ಅಧಿಕಾರಿಗಳ ಮತ್ತು ಸಮಾಜದ ನಿಜವಾದ ಕರ್ತವ್ಯ.ಮಕ್ಕಳು ನಮ್ಮ ಭವಿಷ್ಯ ಎನ್ನುತ್ತೇವೆ. ಹಾಗಾದರೆ ಆ ಭವಿಷ್ಯವನ್ನು ಪ್ರತಿದಿನ ಅಪಾಯದ ರಸ್ತೆಯಲ್ಲಿ ಏಕೆ ಕಳುಹಿಸಬೇಕು? ಒಟ್ಟಾರೆಯಾಗಿ ಗ್ರಾಮೀಣ ಮಕ್ಕಳ ನಿತ್ಯದ ಈ ನರಕಯಾತನೆಯನ್ನು ಕೇಳುವವರ್ಯಾರು? ಇದು ಯಾರನ್ನೂ ದೂಷಿಸುವ ಪ್ರಶ್ನೆಯಲ್ಲ.ಇದು ಒಂದು ಮಗುವಿನ ಸುರಕ್ಷಿತ ಬದುಕಿಗಾಗಿ ಸಮಾಜವೇ ತನ್ನನ್ನು ತಾನೇ ಕೇಳಿಕೊಳ್ಳಬೇಕಾದ ಪ್ರಶ್ನೆಯಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮಾತ್ರ ಪೋಷಕರ ಕರ್ತವ್ಯವಲ್ಲ ಅವರು ಸುರಕ್ಷಿತವಾಗಿ ಶಾಲೆಗೆ ಹೋಗಿ, ಸುರಕ್ಷಿತವಾಗಿ ಮನೆಗೆ ಮರಳುವಂತೆ ಮಾಡುವುದು ಕೂಡ ನಮ್ಮ ಕರ್ತವ್ಯವಾಗಿದೆ. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಪಯಣ ಪ್ರಾಣಕ್ಕೆ ಸಂಚಕಾರ ಆಗದಿರಲಿ ಎಂಬುದೇ ನಮ್ಮ ಆಶಯವಾಗಿದೆ.

ವರದಿ: ರಾಜೇಶ್ ಎಂ ಕಾನರ್ಪ

- Advertisement -

Latest News

error: Content is protected !!