ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಪುಣ್ಯಭೂಮಿ ನೆಲೆಸಮವಾಗಿದ್ದು, ಇದೀಗ ಅಭಿಮಾನಿಗಳೇ ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕವನ್ನು ಸ್ಥಾಪಿಸಲು ಮುಂದಾಗಿದ್ದಾರೆ.
ವಿಷ್ಣು ಅಭಿಮಾನಿಗಳಿಗೋಸ್ಕರ ನಟ-ನಿರ್ದೇಶಕ ಸುದೀಪ್ ಅವರು ಕೆಂಗೇರಿ ಬಳಿ ಅರ್ಧ ಎಕರೆ ಜಾಗ ಖರೀದಿ ಮಾಡಿದ್ದು, ಇನ್ನೊಂದು ವರ್ಷದಲ್ಲಿ ಸ್ಮಾರಕವು ತಲೆಎತ್ತಲಿದೆ. ಇದಕ್ಕಾಗಿ ಸೆ.18ರ ವಿಷ್ಣುವರ್ಧನ್ ಹುಟ್ಟುಹಬ್ಬದಂದೇ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುತ್ತದೆ.
ಈ ಕುರಿತಂತೆ ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು, ‘ಸೆಪ್ಟೆಂಬರ್.2ರಂದು ಸುದೀಪ್ ಅವರ ಹುಟ್ಟುಹಬ್ಬ. ಅಂದೇ ವಿಷ್ಣುವರ್ಧನ್ ಅವರ ಸ್ಮಾರಕದ ಬ್ಲೂಪ್ರಿಂಟ್ ಅನ್ನು ಸುದೀಪ್ ಅನಾವರಣ ಮಾಡಲಿದ್ದಾರೆ. ಆ ನಂತರ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನ, ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು. ಇನ್ನು ಇಲ್ಲಿ ನಿರ್ಮಾಣವಾಗಲಿರುವ ಸ್ಮಾರಕ ಅಭಿಮಾನ್ ಸ್ಟುಡಿಯೋ ಪುಣ್ಯಭೂಮಿಗೆ ಸಮ ಅಲ್ಲ ಅಥವಾ ಮೈಸೂರಿನಲ್ಲಿರುವ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಪರ್ಯಾಯವೂ ಅಲ್ಲ’ ಎಂದು ತಿಳಿಸಿದ್ದಾರೆ.


