
ಬೆಳ್ತಂಗಡಿ: ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿಲು ಇಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ದಿನಾಂಕ:15.08.2025ರಂದು ಆಚರಿಸಲಾಯಿತು. ಸಿಯೋನ್ ಆಶ್ರಮದ ಟ್ರಸ್ಟೀ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ.ಯವರು ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.

ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮರಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟೀಯವರಾದ ಶ್ರೀಯುತ ಡಾ. ಯು. ಸಿ. ಪೌಲೋಸ್ ರವರು ಸ್ವಾತಂತ್ರ್ಯೋತ್ಸವ ಆಚರಣೆಯ ಮಹತ್ವದ ಬಗ್ಗೆ ವಿವರಿಸಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ – ಬಲಿದಾನವನ್ನು ಸ್ಮರಿಸಬೇಕು. ಆಹಿಂಸೆಯ ತತ್ವವನ್ನು ಮುನ್ನಡೆಸಿದ ಮಹಾತ್ಮಾ ಗಾಂಧೀಜಿಯವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡು ದೇಶಪ್ರೇಮ ಮೆರೆಯಬೇಕು. ಎಲ್ಲಾ ಧರ್ಮಿಯರ ಆಚಾರ-ವಿಚಾರಗಳಿಗೆ ಸಮಾನ ಗೌರವವಿದೆ. ದೇಶ ನನ್ನದೆನ್ನುವ ಭಾವನೆ ಜಾಗೃತವಾಗಬೇಕು. ಪರಸ್ಪರ ಪ್ರೀತಿ, ನಂಬಿಕೆಯಿಂದ ಒಗ್ಗಟ್ಟಿನಿಂದ ಬಾಳಬೇಕು ಎಂದರು. ಸಂಸ್ಥೆಯ ವೈದ್ಯಾಧಿಕಾರಿಯವರಾದ ಶ್ರೀಯುತ ಡಾ.ಶಿವಾನಂದ ಸ್ವಾಮಿಯವರು, ಬ್ರಿಟೀಷರಿಂದ ನಮಗೆ ಸ್ವಾತಂತ್ರ್ಯ ದೊರೆತ ಪರಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ಘಟನಾವಳಿಗಳನ್ನು ತಿಳಿಸುತ್ತಾ, ಇನ್ನು ಮುಂದೆ ನಾವು ಯಾವ ರೀತಿ ಐಕ್ಯತೆಯಿಂದ ಬಾಳಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಿದರು. ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ, ಭಾರತದ ಅಭಿವೃದ್ಧಿಗಾಗಿ ಕರ್ತವ್ಯ ನಿರ್ವಹಿಸೋಣ ಎಂದರು.

ಸಂಸ್ಥೆಯ ಹಿತೈಷಿಗಳಾದ ಶ್ರೀಯುತ ಜೋಸೆಫ್ ಪಿ.ಪಿ.ಯವರು, ಸಂಸ್ಥೆಯ ಲೆಕ್ಕಾಧಿಕಾರಿಯವರಾದ ಶ್ರೀಮತಿ ಸೌಮ್ಯ ಯು.ಪಿ.ಯವರು, ಸಿಯೋನ್ ಆಶ್ರಮದ ಎಲ್ಲಾ ಟ್ರಸ್ಟೀ ಸದಸ್ಯರುಗಳು, ಆಡಳಿತ ಮಂಡಳಿಯವರು, ಟ್ರಸ್ಟೀ ಕುಟುಂಬಸ್ಥರು, ಸಿಬ್ಬಂದಿವರ್ಗದವರು ಹಾಗೂ ಆಶ್ರಮ ನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು. ಶ್ರೀಮತಿ ದಿನವತಿಯವರು ಕಾರ್ಯಕ್ರಮ ನಿರೂಪಿಸಿದರು. ಆಶ್ರಮನಿವಾಸಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.


