ನವದೆಹಲಿ: ಪ್ರಸಿದ್ಧ ಧಾರ್ಮಿಕ ತಿರುಮಲ ತಿರುಪತಿ ದೇಗುಲದಲ್ಲಿ ಲಡ್ಡು ತಯಾರಿಕೆಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ, ಮೀನಿನ ಎಣ್ಣೆ ಬಳಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಂದ ವಿಸ್ತೃತ ವರದಿ ನೀಡುವಂತೆ ಕೇಳಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಆಹಾರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು, “ದೇಗುಲಕ್ಕೆ ಸಂಬಂಧಿಸಿದ ಆರೋಪದ ಬಗ್ಗೆ ಆಮೂಲಾಗ್ರ ತನಿಖೆಯಾಗಬೇಕಿದೆ. ಗಂಭೀರ ಮತ್ತು ಕಳವಳಕಾರಿಯಾಗಿರುವಂತಹ ವಿಚಾರವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿಗಳು ತಿಳಿಸಿದ್ದು, ಇದಕ್ಕೆ ತನಿಖೆಯ ಅಗತ್ಯವಿದೆ. ಆರೋಪಿಗಳನ್ನು ಶಿಕ್ಷಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಆರೋಪದ ಕುರಿತಂತೆ ರಾಜ್ಯಸಭಾ ಸದಸ್ಯ, ನಾಲ್ಕು ವರ್ಷಗಳ ಕಾಲ ಟಿಟಿಡಿಯ ಅಧ್ಯಕ್ಷರಾಗಿದ್ದ ವೈವಿ ಸುಬ್ಬಾರೆಡ್ಡಿ ಪ್ರತಿಕ್ರಿಯಿಸಿದ್ದು, ಪವಿತ್ರವಾದ ಲಡ್ಡು ಪ್ರಸಾದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಬೆರೆಸುತ್ತಾರೆ ಎಂಬ ಆರೋಪ ಊಹಿಸಿಕೊಳ್ಳಲು ಸಾಧ್ಯವಿಲ್ಲ.ಚಂದ್ರಬಾಬು ನಾಯ್ಡು ಅವರ ಆರೋಪವನ್ನು ತಳ್ಳಿಹಾಕುವಂತಿದ್ದು, ಇದೊಂದು ಅವರ ನೀಚ ಆರೋಪವಾಗಿದೆ ಎಂದು ಕಿಡಿಕಾರಿದ್ದಾರೆಂದು ವರದಿ ತಿಳಿಸಿದೆ.


