ಬೆಂಗಳೂರು: ನಿನ್ನೆ ನಿಧನರಾದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಪತಿ ನಾಗರಾಜ್ ವಸ್ತಾರೆ ತಿಳಿಸಿದ್ದಾರೆ.
ಇಂದು ಬೆಳಗ್ಗೆ 11:30 ರವರೆಗೂ ನಮ್ಮ ಮನೆಯ ಬಳಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.12 ಗಂಟೆಗೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಗುತ್ತದೆ. ಬನಶಂಕರಿ ಎರಡನೇ ಹಂತದಲ್ಲಿರೋ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಪರ್ಣಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.