
ಕೊಟ್ಟಿಗೆಹಾರ: ಪ್ರವಾಸಕ್ಕೆ ಬಂದಿದ್ದ 26 ವರ್ಷದ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ದೇವರಮನೆ ಗುಡ್ಡದಲ್ಲಿ ನಡೆದಿದೆ.
ಮೃತರನ್ನು ಕಲಬುರಗಿ ಮೂಲದ ನರೇಶ್ (26) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನರೇಶ್, ವೀಕೆಂಡ್ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ದೇವರಮನೆ ಗುಡ್ಡಕ್ಕೆ ಪ್ರವಾಸಕ್ಕೆ ಬಂದಿದ್ದರು.ದೇವರಮನೆ ಗುಡ್ಡದ ಸೌಂದರ್ಯ ಸವಿದು ಹಿಂದಿರುಗುತ್ತಿದ್ದ ವೇಳೆ ಮಾರ್ಗಮಧ್ಯೆ ತುಂತುರು ಮಳೆ ಹಾಗೂ ಚಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋಟ್ ಧರಿಸಲು ನರೇಶ್ ಬೈಕ್ ನಿಲ್ಲಿಸಿದ್ದಾರೆ. ಕೋಟ್ ಹಾಕಿಕೊಳ್ಳುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ.ತಕ್ಷಣ ಸ್ಥಳೀಯರು ಹಾಗೂ ಸ್ನೇಹಿತರು, ಸ್ಥಳೀಯ ಸಮಾಜ ಸೇವಕ ಹಾಗೂ ಆಂಬ್ಯುಲೆನ್ಸ್ ಚಾಲಕ ಆರೀಫ್ ಅವರ ನೇತೃತ್ವದಲ್ಲಿ ನರೇಶ್ ಅವರನ್ನು ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನರೇಶ್ ಮೃತಪಟ್ಟಿದ್ದಾರೆ.
ಸ್ನೇಹಿತರೊಂದಿಗೆ ಖುಷಿಯಿಂದ ಪ್ರವಾಸಕ್ಕೆ ಬಂದಿದ್ದ ನರೇಶ್ ಏಕಾಏಕಿ ಮೃತಪಟ್ಟಿರುವುದು ಸ್ನೇಹಿತರಲ್ಲಿ ದುಃಖದ ವಾತಾವರಣ ಮೂಡಿಸಿದೆ. ಸ್ನೇಹಿತನ ಸಾವಿನಿಂದ ಜೊತೆಗಿದ್ದವರು ಕಣ್ಣೀರಿಟ್ಟಿದ್ದಾರೆ.ಈ ಘಟನೆ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


