ಚಿಕ್ಕಮಗಳೂರು: ಹದಗೆಟ್ಟ ರಸ್ತೆ ಸಮಸ್ಯೆಯು ಇದೀಗ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಮದುವೆ ಸಂಬಂಧಗಳ ಮೇಲೂ ದುಷ್ಪರಿಣಾಮ ಬೀರಲು ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಾಡಂಚಿನ ಹಳ್ಳಿಗಳಲ್ಲಿ ಸೂಕ್ತ ರಸ್ತೆ ಸಂಪರ್ಕವಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬನಿಗೆ ವಧುವಿನ ಕಡೆಯವರು ಮದುವೆ ನಿರಾಕರಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕಳಸ ತಾಲೂಕಿನ ಎಡೆಯೂರು, ಮರಸಣಿಗೆ, ಮಾವಿನಕೆರೆ ಹಾಗೂ ಕೆ.ಕೆಳಗೂರು ಗ್ರಾಮಗಳಲ್ಲಿ ಸುಮಾರು 450 ರಿಂದ 500 ಕೂಲಿ ಕಾರ್ಮಿಕರ ಕುಟುಂಬಗಳು ವಾಸಿಸುತ್ತಿವೆ. ‘ನಿಮ್ಮ ಊರಿಗೆ ಸರಿಯಾದ ದಾರಿಯೇ ಇಲ್ಲ, ಇಂತಹ ಕೆಸರು ಹಾದಿಗೆ ಮಗಳನ್ನು ಕಳುಹಿಸಲು ಸಾಧ್ಯವಿಲ್ಲ’ ಎಂದು ಇತ್ತೀಚಿಗಷ್ಟೇ ಬಂದಿದ್ದ ಮದುವೆ ಪ್ರಸ್ತಾವನೆಯನ್ನು ವಧುವಿನ ಕಡೆಯವರು ತಿರಸ್ಕರಿಸಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಈ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಮುಖ್ಯ ರಸ್ತೆಗೆ ಬರೋಬ್ಬರಿ 20 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ನಿಧಿಯಿಂದ ಟಾರ್ ಹಾಕಲಾಗಿತ್ತು. ಅದಾದ ಬಳಿಕ ಯಾವುದೇ ದುರಸ್ತಿ ನಡೆದಿಲ್ಲ. ಪರಿಣಾಮವಾಗಿ ಪ್ರತಿದಿನ ಶಾಲೆ-ಕಾಲೇಜುಗಳಿಗೆ ತೆರಳುವ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲ್ಲು-ಕೆಸರಿನ ಹಾದಿಯಲ್ಲೇ ಸರ್ಕಸ್ ಮಾಡುತ್ತಾ ಸಾಗಬೇಕಾಗಿದೆ.
ಕಳೆದ 10 ವರ್ಷಗಳಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಕೇವಲ ಸುಳ್ಳು ಭರವಸೆಗಳನ್ನಷ್ಟೇ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಹಾಗೂ ಮತ ಕೇಳಲು ಬರುವ ರಾಜಕಾರಣಿಗಳನ್ನು ತಡೆದು ಪ್ರಶ್ನಿಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.


