ಚಿಕ್ಕಮಗಳೂರು : ಪೊಲೀಸರ ದಾಳಿಗೆ ಹೆದರಿ ಓಡುವಾಗ ಜಾರಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಡಬಗೆರೆ ಸಮೀಪದ ಕಾಫಿತೋಟದಲ್ಲಿ ಆ.28 ರಂದು ನಡೆದಿದೆ.
ಗುಡ್ಡೆಕೊಪ್ಪ ಗ್ರಾಮದ ರಮೇಶ್ (35) ಮೃತಪಟ್ಟ ದುರ್ದೈವಿ. ಬಾಸಾಪುರ ಅರಣ್ಯ ಪ್ರದೇಶದ ಕಾಫಿತೋಟದಲ್ಲಿ ನಿರಂತರವಾಗಿ ಅಂದರ್-ಬಾಹರ್ ಜೂಜಾಟ ನಡೆಯುತ್ತಿತ್ತು. ಈ ಕುರಿತು ಮಾಹಿತಿ ಪಡೆದ ಬಾಳೆಹೊನ್ನೂರು ಪೊಲೀಸರು ದಾಳಿ ನಡೆಸಿದಾಗ, ಜೂಜಾಟದಲ್ಲಿ ನಿರತರಾಗಿದ್ದ 9 ಜನರ ಪೈಕಿ ರಮೇಶ್ ಪೊಲೀಸರಿಗೆ ಹೆದರಿ ಗಾಬರಿಯಿಂದ ಕಾಡಿನಲ್ಲಿ ಓಡಿದ್ದಾರೆ.
ಹೀಗೆ ಓಡುವಾಗ ಆಯತಪ್ಪಿ ಜಾರಿ ಬಿದ್ದಿದ್ದರಿಂದ ರಮೇಶ್ ಅವರ ತಲೆ ಬಂಡೆಗೆ ಬಲವಾಗಿ ಒಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿದ್ದ 9 ಜನರಲ್ಲಿ ಇಬ್ಬರನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದಿದ್ದರು.
ಕಳೆದ ರಾತ್ರಿ ಮನೆಗೆ ಹಿಂತಿರುಗದೇ ಇದ್ದ ಕಾರಣ ಆತಂಕಗೊಂಡಿದ್ದ ಕುಟುಂಬಸ್ಥರು ಇಂದು (ಆ.29) ಬೆಳಿಗ್ಗೆ ಹುಡುಕಾಟ ನಡೆಸಿದಾಗ, ಅರಣ್ಯ ಪ್ರದೇಶದಲ್ಲಿ ತಲೆಯಲ್ಲಿ ರಕ್ತಸ್ರಾವವಾದ ಸ್ಥಿತಿಯಲ್ಲಿ ರಮೇಶ್ ಅವರ ಮೃತದೇಹ ಪತ್ತೆಯಾಗಿದೆ. ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


