ಮಂಗಳೂರು: ಬಾಳೆಪುಣಿ ಗ್ರಾಮದ ಕಣಂತೂರು ದೈವಸ್ಥಾನ ಮತ್ತು ಭಂಡಾರ ಮನೆಯಲ್ಲಿ ಕಳವು ನಡೆಸಿ ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹60,000 ದಂಡ ವಿಧಿಸಿ ತೀರ್ಪು ನೀಡಿದೆ. ಉಳ್ಳಾಲದ ಅಬ್ದುಲ್ ಬಶೀರ್ ಅಲಿಯಾಸ್ ಕಳ್ಳ ಬಶೀರ್ (36) ಶಿಕ್ಷೆಗೆ ಗುರಿಯಾದ ಅಪರಾಧಿ.
2009ರ ಫೆಬ್ರವರಿ 27ರಂದು ಶ್ರೀ ಕ್ಷೇತ್ರ ತೋಡಕುಕ್ಕಿನಾರ್ ದೈವಸ್ಥಾನ ಹಾಗೂ ಭಂಡಾರ ಮನೆಯ ಬೀಗ ಒಡೆದಿದ್ದ ಬಶೀರ್, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ-ಬೆಳ್ಳಿಯ ಆಭರಣಗಳು, ದೈವಿಕ ವಸ್ತುಗಳು ಹಾಗೂ ಕಾಣಿಕೆ ಹಣವನ್ನು ದೋಚಿದ್ದನು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರಂಭದಲ್ಲಿ ಬಂಟ್ವಾಳದ ಕೆಳ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪ್ರೊಸಿಕ್ಯೂಷನ್ ಪರವಾಗಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ತ್ವರಿತ ನ್ಯಾಯಾಲಯವು ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಬಶೀರ್ ಮೇಲಿನ ಅಪರಾಧ ಸಾಬೀತಾಗಿದ್ದರಿಂದ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.


