ಬೆಳ್ತಂಗಡಿ: ಗಂಡಿಬಾಗಿಲಿನ ಸಿಯೋನ್ ಆಶ್ರಮದಲ್ಲಿ ಆಗಸ್ಟ್ 26ರಂದು ಸಾಂತ್ವನಂ ಕುವೈತ್ ಸಹಯೋಗದಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಓಣಂ ಪ್ರಯುಕ್ತ ಆಶ್ರಮದ ಆವರಣದಲ್ಲಿ ಸುಂದರವಾದ ಪೂಕಳಂ ರಚಿಸಲಾಗಿತ್ತು.

ಕಾರ್ಯಕ್ರಮವನ್ನು ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಶ್ರೀ ವಸಂತ್ ಕುಮಾರ್ ಶೆಟ್ಟಿ, ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ. ಪೌಲೋಸ್, ಟ್ರಸ್ಟಿ ಸದಸ್ಯೆ ಶ್ರೀಮತಿ ಮೇರಿ ಯು.ಪಿ., ವೈದ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ ಹಾಗೂ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಸಂತ್ ಕುಮಾರ್ ಶೆಟ್ಟಿ ಅವರು ಓಣಂ ಹಬ್ಬದ ಮಹತ್ವವನ್ನು ವಿವರಿಸಿ ಶುಭಾಶಯಗಳನ್ನು ಕೋರಿದರು.
ಪ್ರಸನ್ನ ನರ್ಸಿಂಗ್ ಕಾಲೇಜು, ಬೆಳ್ತಂಗಡಿಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಆಶ್ರಮದ ನಿವಾಸಿಗಳಲ್ಲಿ ಮತ್ತಷ್ಟು ಸಂತಸ ಮೂಡಿಸಿದರು. ಅವರ ಮನರಂಜನಾ ಕಾರ್ಯಕ್ರಮವು ಓಣಂ ಆಚರಣೆಗೆ ವಿಶೇಷ ಮೆರುಗು ನೀಡಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಓಣಂ ಸದ್ಯವನ್ನು ಸಾಂತ್ವನಂ ಕುವೈತ್ ಪ್ರಾಯೋಜಿಸಿತು. ಆಶ್ರಮದ ನಿವಾಸಿಗಳು, ಸಿಬ್ಬಂದಿ, ಟ್ರಸ್ಟಿಗಳು, ಕುಟುಂಬಸ್ಥರು ಹಾಗೂ ಹಿತೈಷಿಗಳು ಭಾಗವಹಿಸಿ ಹಬ್ಬವನ್ನು ಸಡಗರದಿಂದ ಆಚರಿಸಿದರು.


