ಮಂಗಳೂರು: ಚಾಲನಾ ಪರವಾನಗಿ ಇಲ್ಲದೆ ಬಸ್ ಚಲಾಯಿಸಿ ಅಪಘಾತ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ಹಾಗೂ ಬಸ್ ಮಾಲಕನಿಗೆ ಮಂಗಳೂರಿನ ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಚಾಲಕ ನಿಶಿತ್ ಶೆಟ್ಟಿ ಹಾಗೂ ಬಸ್ ಮಾಲಕ ಪ್ರೀತಂ ದೇವೇಂದ್ರ ಕುಲಾಲ್ ಶಿಕ್ಷೆಗೆ ಗುರಿಯಾದವರು. 2024ರ ಜುಲೈ 10ರಂದು ಬೆಂದೂರ್‌ವೆಲ್ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ಸುಂದರಿ (66) ಎಂಬುವರಿಗೆ ಬಸ್ ಡಿಕ್ಕಿಯಾಗಿ, ಅವರ ಕಾಲಿನ ಮೇಲೆ ಚಕ್ರ ಹರಿದು ಗಂಭೀರ ಗಾಯಗೊಂಡಿದ್ದರು. ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಲಕ್ಷ್ಮಿಕಾಂತ್ ಪ್ರಕರಣದ ತನಿಖೆ ನಡೆಸಿ, ಚಾಲಕನಿಗೆ ಲೈಸನ್ಸ್ ಇಲ್ಲದ ಕುರಿತು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮಂಗಳೂರಿನ 8ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಮೋನಿಷ ಆರ್., ಲೈಸನ್ಸ್ ಇಲ್ಲದೆ ಬಸ್ ಚಲಾಯಿಸಿದ ಚಾಲಕ ನಿಶಿತ್‌ಗೆ 1 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ₹5,000 ದಂಡ ವಿಧಿಸಿದ್ದಾರೆ. ಅದೇ ರೀತಿ, ಲೈಸನ್ಸ್ ಇಲ್ಲದ ವ್ಯಕ್ತಿಗೆ ಬಸ್ ಚಲಾಯಿಸಲು ನೀಡಿದ ಮಾಲಕ ಪ್ರೀತಮ್‌ಗೂ 1 ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ₹5,000 ದಂಡ ವಿಧಿಸಿ ಆದೇಶಿಸಿದ್ದಾರೆ.


