ಚಿಕ್ಕಮಗಳೂರು : ತಾನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್‌ಐ ಎಂದು ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ ಹಾಗೂ ಐಷಾರಾಮಿ ಕಾರುಗಳನ್ನು ಪಡೆದು ವಂಚಿಸುತ್ತಿದ್ದ ನಕಲಿ ಲೇಡಿ ಪಿಎಸ್‌ಐಯನ್ನು ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಮಂಗಳವಾರ (ಸೆ. 29) ಬಂಧಿಸಿದ್ದಾರೆ.
ರಾಮನಗರ ಜಿಲ್ಲೆ ಮೂಲದ ನಿವೇದಿತಾ ಗೌಡ ಬಂಧಿತ ಆರೋಪಿ. ಚಿಕ್ಕಮಗಳೂರಿನಲ್ಲಿ ಕೆಫೆ ನಡೆಸುತ್ತಿದ್ದ ಈಕೆ, ಪೊಲೀಸ್ ಅಧಿಕಾರಿಯಂತೆ ಕಾಣಿಸಿಕೊಳ್ಳಲು ಅದೇ ಶೈಲಿಯ ಹೇರ್‌ಕಟ್ ಹಾಗೂ ವೇಷಭೂಷಣ ಧರಿಸುತ್ತಿದ್ದಳು. ರಜೆಯಲ್ಲಿ ಬಂದಿರುವುದಾಗಿ ಹೇಳಿಕೊಂಡು ಕೆಫೆಗೆ ಬರುತ್ತಿದ್ದ ಸಾರ್ವಜನಿಕರು ಹಾಗೂ ಯುವಕರನ್ನು ಪರಿಚಯಿಸಿಕೊಂಡು ವಂಚನೆ ಎಸಗುತ್ತಿದ್ದಳು. ಅಲ್ಲದೆ, ಪರಿಚಯಸ್ಥರ ಐಷಾರಾಮಿ ಕಾರುಗಳನ್ನು ಓಡಾಟಕ್ಕೆಂದು ಪಡೆದು ಬಳಿಕ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಳು ಎನ್ನಲಾಗಿದೆ.
ಆರೋಪಿ ವಿರುದ್ಧ ಚಿಕ್ಕಮಗಳೂರು ನಗರ ಹಾಗೂ ಬಸವನಹಳ್ಳಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, 25ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂ. ವಂಚಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈಗಾಗಲೇ 20ಕ್ಕೂ ಹೆಚ್ಚು ಸಂತ್ರಸ್ತರು ದೂರು ನೀಡಿದ್ದಾರೆ.
ವಿಚಾರಣೆ ವೇಳೆ ನಿವೇದಿತಾ ತನ್ನ ಪ್ರಿಯಕರ ‘ದೇವು’ ಎಂಬಾತನಿಗೆ ವಂಚಿಸಿದ ಹಣ ಮತ್ತು ಚಿನ್ನ ನೀಡಿದ್ದಾಗಿ ಬಾಯ್ಬಿಟ್ಟಿದ್ದು, ಪೊಲೀಸರು ಆತನ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ. ಆರೋಪಿಯ ಮೊಬೈಲ್‌ನಲ್ಲಿ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


