ಪಡುಬಿದ್ರಿ: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವ್ಯಾಪ್ತಿಯ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಯುವಜನರನ್ನು ಕ್ರೀಡೆಯ ಮೂಲಕ ಒಗ್ಗೂಡಿಸುವ ಉದ್ದೇಶದಿಂದ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ‘ಭಾರತ್ ಜೋಡೋ ಟ್ರೋಫಿ–2026’ ಕ್ರೀಡಾಕೂಟ ಹಾಗೂ ಭಾರತ್ ಜೋಡೋ ರ‍್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್ ತಿಳಿಸಿದ್ದಾರೆ.
ಗಾಂಧೀ ಜಯಂತಿ ಪ್ರಯುಕ್ತ ಅಕ್ಟೋಬರ್ 2ರಂದು ಸಂಜೆ 4 ಗಂಟೆಗೆ ಕಾಪುವಿನ ರಾಜೀವ್ ಭವನದಿಂದ ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದವರೆಗೆ ‘ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ’ ಎಂಬ ಸಂದೇಶದೊಂದಿಗೆ ಬೃಹತ್ ಭಾರತ್ ಜೋಡೋ ರ‍್ಯಾಲಿ ನಡೆಯಲಿದ್ದು, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಚಾಲನೆ ನೀಡಲಿದ್ದಾರೆ. ಯುವಜನರಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸುವುದು, ಆರೋಗ್ಯಕರ ಜೀವನಶೈಲಿಗೆ ಉತ್ತೇಜನ ನೀಡುವುದು ಹಾಗೂ ಮಾದಕ ವ್ಯಸನದಿಂದ
ದೂರವಿರುವಂತೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 3 ಮತ್ತು 4ರಂದು ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ‘ಭಾರತ್ ಜೋಡೋ ಟ್ರೋಫಿ–2026’ ಕ್ರೀಡಾ ಮಹೋತ್ಸವ ನಡೆಯಲಿದೆ ಎಂದು ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಬೋಧ್ ಚಂದ್ರ ಹೆಜಮಾಡಿ ತಿಳಿಸಿದ್ದಾರೆ. ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವ್ಯಾಪ್ತಿಯ ವಿವಿಧ ಗ್ರಾಮೀಣ ಕಾಂಗ್ರೆಸ್ ಸಮಿತಿಗಳಿಂದ 19 ಕ್ರಿಕೆಟ್ ತಂಡಗಳು ಹಾಗೂ 15 ಮಹಿಳಾ ತಂಡಗಳು ಭಾಗವಹಿಸಲಿವೆ.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವಾಗಿ ₹55,555 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನವಾಗಿ ₹33,333 ಹಾಗೂ ಶಾಶ್ವತ ಫಲಕ ನೀಡಲಾಗುವುದು. ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ, ಶ್ರೇಷ್ಠ ಬೌಲರ್ ಹಾಗೂ ಶ್ರೇಷ್ಠ ಬ್ಯಾಟರ್ ಪ್ರಶಸ್ತಿಗಳನ್ನೂ ನೀಡಿ ಆಟಗಾರರನ್ನು ಗೌರವಿಸಲಾಗುವುದು. ಮಹಿಳೆಯರ ತ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ₹22,222 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ ₹11,111 ಹಾಗೂ ಶಾಶ್ವತ ಫಲಕ ನೀಡಲಾಗುವುದು. ಉತ್ತಮ ಎಸೆತಗಾರ್ತಿ, ಉತ್ತಮ ಹಿಡಿತಗಾರ್ತಿ ಹಾಗೂ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಗಳ ಮೂಲಕ ಪ್ರತಿಭಾವಂತ ಆಟಗಾರ್ತಿಯರನ್ನು ಗೌರವಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸಂಯೋಜಕ ಅಬ್ದುಲ್ ಅಝೀಝ್ ಹೆಜಮಾಡಿ, ಸುಧೀರ್ ಕರ್ಕೇರ, ವಿಶಾಲ್ ಬಂಗೇರ ಹಾಗೂ ದೀಕ್ಷಾ ಕೆ. ಉಪಸ್ಥಿತರಿದ್ದರು.


