ಚಿಕ್ಕಮಗಳೂರು: ರೌಡಿ ಶೀಟರ್ಗಳೊಂದಿಗೆ ಬಾರ್ನಲ್ಲಿ ಪಾರ್ಟಿ ನಡೆಸಿ ಸಾರ್ವಜನಿಕರ ಆಕ್ರೋಶಕ್ಕೆ ಈಡಾಗಿದ್ದ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆಯ ಎಎಸ್ಐ ವೀರೇಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಆದೇಶಿಸಿದ್ದಾರೆ.
ಸುಮಾರು ಒಂದು ವಾರದ ಹಿಂದೆ ಕಡೂರು ತಾಲೂಕಿನ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದ ಬಾರ್ ಒಂದರಲ್ಲಿ ಎಎಸ್ಐ ವೀರೇಂದ್ರ ಅವರು ರೌಡಿ ಶೀಟರ್ಗಳೊಂದಿಗೆ ಪಾರ್ಟಿ ಆಯೋಜಿಸಿ, ಇಡೀ ರಾತ್ರಿ ಜೋರಾಗಿ ಹಾಡುಗಳನ್ನು ಹಾಕಿಕೊಂಡು ಮಜಾ ಮಾಡುತ್ತಿದ್ದರು. ಇದನ್ನು ವಿರೋಧಿಸಿ ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಬಾರ್ ಮುಂಭಾಗ ರಾತ್ರೋರಾತ್ರಿ ಧರಣಿ ನಡೆಸಿ, ಬಾರ್ ಬಂದ್ ಮಾಡುವಂತೆ ಆಗ್ರಹಿಸಿದ್ದರು.
ಈ ಕುರಿತು ಸಾರ್ವಜನಿಕರಿಂದ ನಿರಂತರ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಶೀಲಿಸಿದ ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ, ಕರ್ತವ್ಯ ಲೋಪ ಎಸಗಿದ ಎಎಸ್ಐ ಅವರನ್ನು ಅಮಾನತುಗೊಳಿಸಿ ಕ್ರಮ ಜರುಗಿಸಿದ್ದಾರೆ


