ಉಳ್ಳಾಲ: ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಉಳ್ಳಾಲ ತಾಲೂಕಿನ ಕುಂಪಲದ ವ್ಯಕ್ತಿಯೊಬ್ಬರು ಉತ್ತರಾಖಂಡದ ಯಮುನೋತ್ರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕುಂಪಲ ವಿದ್ಯಾನಗರ ನಿವಾಸಿ ರಾಜೇಶ್ ಗಾಣಿಗ (53) ಮೃತಪಟ್ಟವರು.
ರಾಜೇಶ್ ಅವರು ಸೆ.18ರಂದು ಉಳ್ಳಾಲದ 14 ಮಂದಿ ಸಹಯಾತ್ರಿಕರೊಂದಿಗೆ ಮಂಗಳೂರಿನಿಂದ ರೈಲಿನಲ್ಲಿ ಚಾರ್ ಧಾಮ್ ಯಾತ್ರೆಗೆ ತೆರಳಿದ್ದರು. ಉತ್ತರ ಭಾರತದ ವಿವಿಧ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿದ ಬಳಿಕ ಸೋಮವಾರ ಉತ್ತರಾಖಂಡ ತಲುಪಿದ್ದ ತಂಡ, ಪ್ರವಾಸಿ ಕೇಂದ್ರವೊಂದರ ಕೊಠಡಿಯಲ್ಲಿ ತಂಗಿ ವಿಶ್ರಾಂತಿ ಪಡೆದಿತ್ತು.
ಮಂಗಳವಾರ ಬೆಳಗ್ಗೆ ಉತ್ತರಾಖಂಡದ ಗಿರಿ ಶಿಖರ ಪ್ರದೇಶದಲ್ಲಿ ಸುಮಾರು ಏಳು ಕಿ.ಮೀ. ಪಾದಯಾತ್ರೆ ನಡೆಸಿದ ರಾಜೇಶ್, ಬಳಿಕ ಕ್ಷೇತ್ರದ ಆವರಣದಲ್ಲಿದ್ದ ಕುರ್ಚಿಯೊಂದರಲ್ಲಿ ಕುಳಿತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಸಹಯಾತ್ರಿಕರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ರಾಜೇಶ್ ಅವರ ಮೃತದೇಹವನ್ನು ಉತ್ತರಾಖಂಡದ ಡೆಹ್ರಾಡೂನ್ನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ವೃತ್ತಿಯಲ್ಲಿ ವೆಲ್ಡರ್ ಆಗಿದ್ದ ರಾಜೇಶ್, ಜಪ್ಪಿನಮೊಗರುನಲ್ಲಿ ಸ್ವಂತ ವರ್ಕ್ಶಾಪ್ ನಡೆಸುತ್ತಿದ್ದರು. ಮೃತರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.


