ಬೆಳ್ತಂಗಡಿ : ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚಿಸಲು ಗ್ರಾಮಸಭೆ ಕರೆದು ಸಭೆಗೆ ಗೈರು ಹಾಜರಾಗಿ ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಶಿರ್ಲಾಲು ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ಸುಶೀಲಾ ಇವರನ್ನು ಕರ್ತವ್ಯದಿಂದ ಅಮಾನತು ಗೊಳಿಸಿ ದ.ಕ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್ ನಲ್ಲಿ ಕಸ್ತೂರಿ ರಂಗನ್ ವರದಿಯ ಬಗ್ಗೆ ಚರ್ಚಿಸಲು ವಿಶೇಷ ಗ್ರಾಮಸಭೆಯನ್ನು ಸೆ.25 ರಂದು ನಡೆಸಲು ನಿಗಧಿಪಡಿಸಲಾಗಿತ್ತು. ಅಭಿವೃದ್ಧಿ ಅಧಿಕಾರಿಯವರು ಈ ಸಭೆಯನ್ನು ಸೆ.21 ರಂದು ನಿಗದಿ ಪಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ಆದರೆ ಸಭೆಗೆ ಜನರು ಬಂದರೂ ಅಭಿವೃದ್ಧಿ ಅಧಿಕಾರಿ ಗೈರುಹಾಜರಾಗಿದ್ದರು ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈಬಗ್ಗೆ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರೂ ಗ್ರಾ.ಪಂ ಗೆ ಆಗಮಿಸಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಲ್ಲಿಯೂ ಕೇಳಿಕೊಂಡಿದ್ದರು.
ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ ಬೆಳ್ತಂಗಡಿ ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ ಯವರು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ವರದಿ ನೀಡಿದ್ದು ಈ ವರದಿಯ ಆಧಾರದ ಮೇಲೆ ಶಿರ್ಲಾಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಸೆ 22 ರಂದು ಆದೇಶ ಹೊರಡಿಸಿದ್ದಾರೆ.


