ಬಂಟ್ವಾಳ: ಬೇರೊಬ್ಬ ಯುವತಿಯ ಪೋಸ್ಟ್ ಗೆ ಲೈಕ್ ಒತ್ತಿದ್ದಕೆ ನಿಶ್ಚಿತಾರ್ಥ ಮಾಡಿಕೊಂಡಾಕೆ ಗಲಾಟೆ ಮಾಡಿದ್ದರಿಂದ ಮನನೊಂದು ದೈವ ಪಾತ್ರಿ ಒಬ್ಬರು ನೇಣಿಗೆ ಶರಣಾದ ಘಟನೆ ಪೂಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚೇತನ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಜ.21 ರಂದು ಚೇತನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಯುವಕನ ತಾಯಿ ಪುಷ್ಪಾ ಪೂಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.
ಚೇತನ್ ದೈವದ ಪಾತ್ರಿಯಾಗಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಮಂಗಳೂರಿನ ಯುವತಿ ಚೈತನ್ಯ ಎಂಬಾಕೆಯೊಂದಿಗೆ 8 ತಿಂಗಳ ಹಿಂದೆ ವಿವಾಹ ನಿಶ್ಚಿಯವಾಗಿತ್ತು. ಜ.21 ರಂದು ಚೇತನ್ ತಾಯಿ ಪುಷ್ಪಾ ಅವರು ತನ್ನ ತವರು ಮನೆಗೆ ಹೋಗಿದ್ದರು. ಚೇತನ್ ಒಬ್ಬನೇ ಮನೆಯಲ್ಲಿದ್ದರು. ಬೆಳಿಗ್ಗೆ 11 ಗಂಟೆಯಂದು ಚೈತನ್ಯಾ ಪುಷ್ಪಾರಿಗೆ ಕರೆ ಮಾಡಿ ನಾನು ನಿನ್ನ ಮನೆಗೆ ಬಂದಿದ್ದೇನೆ. ಚೇತನ್ ಮನೆಯಲ್ಲಿ ಮಲಗಿದ್ದವನು ಎದ್ದೇಳುತ್ತಿಲ್ಲ, ಕೂಡಲೇ ಮನೆಗೆ ಬನ್ನಿ ಎಂದು ಹೇಳಿದ್ದಳು.
ಹೀಗಾಗಿ 11.30ರ ಸುಮಾರಿಗೆ ಪುಷ್ಪಾ ಅವರು ತವರು ಮನೆಯಿಂದ ತನ್ನ ಮನೆಗೆ ಬಂದಿದ್ದಾರೆ. ಈ ವೇಳೆ ಚೇತನ್ ಬಾತ್‌ರೂಂ ಮತ್ತು ಮನೆಯ ಪ್ಯಾಸೇಜ್ ಮಧ್ಯೆ ಮಲಗಿದ್ದ ಸ್ಥಿತಿಯಲ್ಲಿದ್ದರು. ಪುಷ್ಪಾ ಅವರು ಮನೆಯ ಛಾವಣಿ ಕಡೆ ನೋಡಿದಾಗ ನೇಣು ಹಾಕಿದ ಸ್ಥಿತಿಯಲ್ಲಿ ಲುಂಗಿಯೊಂದು ಕಂಡು ಬಂದಿದೆ.ಈ ಬಗ್ಗೆ ಪುಷ್ಪಾ ಅವರು ಚೈತನ್ಯಾರಲ್ಲಿ ಪ್ರಶ್ನೆ ಮಾಡಿದಾಗ, ಇನ್‌ಸ್ಟಾಗ್ರಾಂನಲ್ಲಿ ಚೇತನ್ ಹುಡುಗಿಯೊಬ್ಬಳ ಪೋಸ್ಟ್ ಗೆ ಲೈಕ್ ಮಾಡಿದ್ದನ್ನು ಪ್ರಶ್ನಿಸಿದ್ದೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಬೇಸರಗೊಂಡ ಚೇತನ್ ಮನೆಯೊಳಗೆ ಓಡಿ ಹೋಗಿ ಛಾವಣಿಯ ಅಡ್ಡಕ್ಕೆ ಲುಂಗಿ ಮೂಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನೇ ಕೆಳಗಿಳಿಸಿ ಆರೈಕೆ ಮಾಡಿದ್ದೇನೆ ಎಂದು ತಿಳಿಸಿದ್ದಳು ಎಂದು ಪುಷ್ಪಾ ಅವರು ದೂರಿನಲ್ಲಿ ತಿಳಿಸಿದ್ದಾರೆ.