Wednesday, June 24, 2026
Homeಕರಾವಳಿಬಂಟ್ವಾಳ:  ತೆಂಕುತಿಟ್ಟು ಯಕ್ಷಗಾನದ ಅಪ್ರತಿಮ ಕಲಾವಿದ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೂರಿಕುಮೇರಿ...

ಬಂಟ್ವಾಳ:  ತೆಂಕುತಿಟ್ಟು ಯಕ್ಷಗಾನದ ಅಪ್ರತಿಮ ಕಲಾವಿದ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೂರಿಕುಮೇರಿ ಕೆ. ಗೋವಿಂದ ಭಟ್ ವಿಧಿವಶ

- Advertisement -
- Advertisement -

ಬಂಟ್ವಾಳ:  ತೆಂಕುತಿಟ್ಟು ಯಕ್ಷಗಾನದ ಅಪ್ರತಿಮ ಕಲಾವಿದ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೂರಿಕುಮೇರಿ ಕೆ. ಗೋವಿಂದ ಭಟ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ತೆಂಕುತಿಟ್ಟು ಯಕ್ಷಗಾನದ ನಡೆದಾಡುವ ವಿಶ್ವಕೋಶ, ಅಭಿನಯ ಚತುರ ಎಂದು ಕರೆಯಲ್ಪಡುತ್ತಿದ್ದ ಅವರು  ಕ್ಷಿಣ ಕನ್ನಡ ಬಂಟವಾಳ ತಾಲೂಕಿನ ವಿಟ್ಲದ ಬಳಿಯ ಕೋಡಪದವು ಕುಕ್ಕೆಮನೆಯಲ್ಲಿ ಮಾರ್ಚ್ 22, 1940 ರಂದು ಲಕ್ಷ್ಮೀ ಅಮ್ಮ ಮತ್ತು ಶಿನಿಲ ಶಂಕರ ನಾರಾಯಣರಿಗೆ ಪುತ್ರನಾಗಿ ಜನಿಸಿದರು. ಕಡು ಬಡತನದ ನಡುವೆಯೂ ಏಳನೇ ತರಗತಿಯವರಿಗೆ ಇವರು ವಿದ್ಯಾಭ್ಯಾಸ ಮಾಡಿದರು. ಯಕ್ಷಗಾನದ ಮೇಲಿದ್ದ ಅಪಾರ ಪ್ರೀತಿಯಿಂದಾಗಿ 1951ರಲ್ಲಿ  ಬಣ್ಣ ಹಚ್ಚಿ ರಂಗಪ್ರವೇಶ ಮಾಡಿದರು.

ಇವರು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಸತತ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಅಪರೂಪದ ಕಲಾವಿದ. ಮೇಳದ ಶಿಸ್ತು ಮತ್ತು ಸಂಪ್ರದಾಯದ ಕಾವಲುಗಾರನಂತೆ ಇವರು ಕಾರ್ಯನಿರ್ವಹಿಸಿದ್ದರು. ಹದಿಹರೆಯದಿಂದ ಹಿಡಿದು ಇಳಿವಯಸ್ಸಿನವರೆಗೂ ಯಕ್ಷಗಾನ ರಂಗದ ಮೇಲೆ ಸಕ್ರಿಯರಾಗಿದ್ದ ಇವರು, ಯಕ್ಷಗಾನದ ಏರಿಳಿತಗಳನ್ನು ಹತ್ತಿರದಿಂದ ಕಂಡವರು.  “ದಶಾವತಾರಿ” ಎಂದೇ ಕರೆಯಲ್ಪಡುತ್ತಿದ್ದ ಇವರು ಯಾವುದೇ ವೇಷಕ್ಕಾದರೂ ಸೈ ಎನಿಸಿಕೊಳ್ಳುತ್ತಿದ್ದರು. ಇವರ ಪಾತ್ರಗಳಲ್ಲಿನ ಗಾಂಭೀರ್ಯ ಮತ್ತು ಸಂಭಾಷಣಾ ಚತುರತೆ ಅದ್ವಿತೀಯವಾಗಿತ್ತು. ಅರ್ಜುನ, ಭೀಷ್ಮ, ಕರ್ಣ, ಕೌರವ, ದಶರಥ, ವಾಲಿಯಂತಹ ಪೌರಾಣಿಕ ಪಾತ್ರಗಳಿಗೆ ಹೊಸ ಆಯಾಮ ನೀಡಿದವರು ಗೋವಿಂದ ಭಟ್ಟರು . ಇವರ ಮುಖಭಾವಗಳಲ್ಲಿ ನವರಸಗಳು ಲಾಸ್ಯವಾಡುತ್ತಿದ್ದವು. ವಿಶೇಷವಾಗಿ ವೀರ ಮತ್ತು ಕರುಣಾ ರಸದ ಪಾತ್ರಗಳಲ್ಲಿ ಇವರನ್ನು ಮೀರಿಸುವವರಿಲ್ಲ ಎಂಬ ಮಾತು ಕಲಾಭಿಮಾನಿಗಳಲ್ಲಿದೆ. ಇವರ ಸಾಧನೆಗೆ 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ದಕ್ಕಿದೆ. ಮಾತ್ರವಲ್ಲ ಅಭಿಮಾನಿಗಳು ಇವರ ಕಲಾ ಜೀವನವನ್ನು ದಾಖಲಿಸಲು ‘ಸವ್ಯಸಾಚಿ’ ಎಂಬ ಸ್ಮರಣ ಸಂಚಿಕೆಯನ್ನು ಅರ್ಪಿಸಿದ್ದರು. ಯಕ್ಷಗಾನದ ಮೇರು ವ್ಯಕ್ತಿತ್ವ ಸೂರಿಕುಮೇರಿ ಗೋವಿಂದ ಭಟ್ಟರ ನಿಧನಕ್ಕೆ ಯಕ್ಷಗಾನ ಕಲಾವಿದರು,ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

- Advertisement -

Latest News

error: Content is protected !!