ಮಂಗಳೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಜನಜೀವನವೇ ಅಸ್ತವ್ಯಸ್ತವಾಗಿದೆ. ಈ ಸಂಕಷ್ಟದ ಸಮಯದಲ್ಲಿ ದೈವದ ಆರಾಧನೆಯನ್ನೇ ನಂಬಿ ಜೀವನ ಸಾಗಿಸುವ ಬಂಟ ಸಮಾಜದ ದೈವ ಪಾತ್ರಿ ಮತ್ತು ಮುಕ್ಕಾಲ್ದಿಗಳಿಗೆ ಜಾಗತಿಕ ಬಂಟ ಸಂಘಗಳ ಒಕ್ಕೂಟವು ಆರ್ಥಿಕ ನೆರವು ನೀಡಿದೆ.
ಈ ಮೂಲಕ ಕೊರೋನಾ ಸಮಯದಲ್ಲಿ ಬಂಟ ಸಮುದಾಯದ ದೈವ ಪಾತ್ರಿ ಮತ್ತು ಮುಕ್ಕಾಲ್ದಿಗಳ ನಿತ್ಯ ಜೀವನವು ಯಾವುದೇ ವಿಘ್ನವಿಲ್ಲದೆ ಸಾಗಲು ಸಹಾಯವಾದಂತಾಗಿದೆ.
ಲಾಕ್ ಡೌನ್ ಸಮಯದಲ್ಲಿ ಪಾತ್ರಿಗಳ ಕಷ್ಟವನ್ನು ಜಾಗತಿಕ ಬಂಟ ಸಂಘಗಳ ಒಕ್ಕೂಟದ ಮುಂದೆ ಇಟ್ಟಾಗ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ದೈವ ಪಾತ್ರಿ ಮತ್ತು ಮುಕ್ಕಾಲ್ದಿಗಳಿಗೆ ನೆರವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಾಗತಿಕ ಬಂಟ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಒಕ್ಕೂಟದ ಎಲ್ಲ ಪದಾಧಿಕಾರಿಗಳಿಗೆ ಬಂಟ ಸಮುದಾಯದ ಕುಲ ದೈವವಾದ ಶ್ರೀ ಕಾಂತೇರಿ ಧೂಮಾವತಿ, ಶ್ರೀ ಕೊಡಮಣಿತ್ತಾಯ ಹಾಗು ಸಮಸ್ತ ದೈವ ದೇವರುಗಳ ಅನುಗ್ರಹ ನಿಮಗಿರಲಿ ಎಂದು ಧರ್ಮದೈವಗಳಲ್ಲಿ ಪ್ರಾರ್ಥಿಸುವುದಾಗಿ ಬಂಟ ಸಮುದಾಯದ ರಾಜನ್ ದೈವದ ದರ್ಶನ ಪಾತ್ರಿಗಳು ಮತ್ತು ಮುಕ್ಕಾಲ್ದಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.