ಹಾಸನದಲ್ಲಿ ಹೃದಯಾಘಾತದಿಂದ ಒಂದೇ ದಿನ 3 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಹಾಸನ ಜಿಲ್ಲೆಯೊಂದರಲ್ಲೇ ಒಂದು ತಿಂಗಳ ಅಂತರದಲ್ಲಿ ಹಾರ್ಟ್ ಆಟ್ಯಾಕ್ ಗೆ ಬಲಿಯಾದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆಪಿ ನಗರದ ಲೇಪಾಕ್ಷಿ (50) ಎನ್ನುವವರು ಬೆಳಿಗ್ಗೆ ಮನೆಯಲ್ಲಿದ್ದಾಗಲೇ ಸುಸ್ತು ಎಂದು ಕುಸಿದು ಬಿದಿದ್ದರು. ಲೇಪಾಕ್ಷಿ ಅವರನ್ನು ತಕ್ಷಣ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಲೇಪಾಕ್ಷಿ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಟೀ ಕುಡಿಯುತ್ತಿರುವಾಗಲೇ ಪ್ರಾಧ್ಯಾಪಕ ಒಬ್ಬರು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಳೆನರಸೀಪುರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಮುತ್ತಯ್ಯ (58) ಸಾವನಪ್ಪಿದ್ದಾರೆ.
ಹಾಸನ ಜಿಲ್ಲೆಯ ಜನರಾಯಪಟ್ಟಣದಲ್ಲಿ ಜಮೀನಿನಲ್ಲಿ ಉಳುಮೆ ಮಾಡುವಾಗಲೇ ಯೋಧ ಸಾವನ್ನಪ್ಪಿದ್ದಾನೇ. ಮೃತ ಯೋಧನನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಲೋಹಿತ್ (38) ಎಂದು ತಿಳಿದುಬಂದಿದೆ. 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಲೋಹಿತ್ ರಜೆಗೆಂದು ಊರಿಗೆ ತೆರಳಿದ್ದಾಗ ಜಮೀನು ಉಳುಮೆ ಮಾಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ಭಾನುವಾರ ಸಾವನ್ನಪ್ಪಿದ್ದಾರೆ.
ಇನ್ನು ಒಂದು ತಿಂಗಳಲ್ಲಿ ಸಾಲು ಸಾಲಾಗಿ ಹೃದಯಾಘಾತಕ್ಕೆ ಜನ ಬಲಿಯಾಗಿದ್ದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು. ಈ ಕುರಿತು ತನಿಖೆ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.ಅದರಂತೆ ಆರೋಗ್ಯ ಇಲಾಖೆಯಿಂದ ಟೆಕ್ನಿಕಲ್ ಕಮಿಟಿಯನ್ನು ರಚನೆ ಮಾಡಲಾಗಿದೆ. ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು, ಜಯದೇವ ಸಂಸ್ಥೆಯ ತಜ್ಞರು ಸೇರಿದಂತೆ 10 ಜನ ತಜ್ಞರ ತಂಡ ರಚನೆ ಮಾಡಲು ಸೂಚನೆ ನೀಡಲಾಗಿದೆ.


